ಉ.ಪ್ರ: ಉತ್ತರ ಪ್ರದೇಶದ ಝಾನ್ಸಿಯ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 10 ನವಜಾತ ಶಿಶುಗಳು ಸಾವನ್ನಪ್ಪಿವೆ.
ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಾ ಇಡೀ ಆಸ್ಪತ್ರೆಯನ್ನೇ ಆವರಿಸಿತ್ತು. ಈ ವೇಳೆ ವ್ಯಕ್ತಿಯೊಬ್ಬ ಬಂದು ಹತ್ತಾರು ಶಿಶುಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ದುರಾದೃಷ್ಟವೆಂದರೆ ಅವರ ಅವಳಿ ಹೆಣ್ಣುಮಕ್ಕಳನ್ನೇ ಅವರಿಂದ ಉಳಿಸಿಕೊಳ್ಳಲಾಗಲಿಲ್ಲ.
ಯಾಕುಂ ಮನ್ಸೂರಿ ಮತ್ತು ಅವರ ಪತ್ನಿ ನಜ್ಮಾ ಅವಳಿ ಮಕ್ಕಳ ಮೇಲೆ ನಿಗಾ ಇಡಲು ಒಬ್ಬರಾದ ಮೇಲೊಬ್ಬರು ಅಲ್ಲಿರುತ್ತಿದ್ದರು. ನವೆಂಬರ್ 15 ರ ರಾತ್ರಿ ಬೆಂಕಿ ಹೊತ್ತಿಕೊಂಡಾಗ ಅವರು ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ತೀವ್ರ ನಿಗಾ ಘಟಕದ ಹೊರಗೆ ಮಲಗಿದ್ದರು. ಬೆಂಕಿ ಹೊತ್ತಿಕೊಂಡ ಸಂದರ್ಭ ಯಾಕುಂ ಮನ್ಸೂರಿ ಕಿಟಕಿಯನ್ನು ಒಡೆದು ಕೊಠಡಿಗೆ ಧಾವಿಸಿ ಸಾಧ್ಯವಾದಷ್ಟು ಶಿಶುಗಳನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಈ ವೇಳೆ ತಮ್ಮ ಸ್ವಂತ ಅವಳಿ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಘಟನೆಯಲ್ಲಿ ಕೆಲ ಮಕ್ಕಳ ತಾಯಂದಿರು ತಮ್ಮ ಕಣ್ಣ ಮುಂದೆಯೇ ನವಜಾತ ಮಗು ಸುಟ್ಟು ಹೋಗುವ ದೃಶ್ಯವನ್ನು ನೋಡಿರುವುದಾಗಿ ವರದಿಯಾಗಿದೆ.