ಮಂಗಳೂರು: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣ: ಸೋಮೇಶ್ವರದ ವಾಝ್ಕೋ ಬೀಚ್ ರೆಸಾರ್ಟ್ ನ ಮಾಲೀಕ ಮತ್ತು ಮ್ಯಾನೇಜರ್ ಅರೆಸ್ಟ್

ಮಂಗಳೂರು: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೇಶ್ವರದ ವಾಝ್ಕೋ ಬೀಚ್  ರೆಸಾರ್ಟ್ ನ ಮಾಲೀಕ ಮತ್ತು ಮ್ಯಾನೇಜರ್​ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ರೆಸಾರ್ಟ್ ನ ಮಾಲೀಕ ಮನೋಹರ್ ಮತ್ತು ಮ್ಯಾನೇಜರ್ ಭರತ್ ಬಂಧಿತರು.

ಮೈಸೂರು ಕುರುಬರ ಹಳ್ಳಿ 4ನೇ ಕ್ರಾಸ್‌ ನಿವಾಸಿ ನಿಶಿತಾ ಎಂ.ಡಿ.(21), ಮೈಸೂರು ರಾಮಾನುಜ ರಸ್ತೆಯ ಕೆ.ಆರ್.ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯನಗರ ದೇವರಾಜ ಮೊಹಲ್ಲಾ ನಿವಾಸಿ ಕೀರ್ತನಾ  ಎನ್(21) ಶನಿವಾರ ಬೆಳಗ್ಗೆ  ರೆಸಾರ್ಟ್  ಬಂದು ತಂಗಿದ್ದರು.

ಭಾನುವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ  ರೆಸಾರ್ಟ್ ನ  ಮುಂಭಾಗದಲ್ಲಿದ್ದ ಈಜುಕೊಳಕ್ಕೆ ಇಳಿದಿದ್ದರು. ಈ ವೇಳೆ  ಯುವತಿ ಈಜುಕೊಳದ ಮಧ್ಯದ ಆಳವಿದ್ದ ಕಡೆ ಹೋಗಿ ಸಿಲುಕಿಕೊಂಡಿದ್ದಳು. ಆಕೆ ಒದ್ದಾಡುತ್ತಿರುವುದನ್ನು ಗಮನಿಸಿ ಮತ್ತಿಬ್ಬರು ರಕ್ಷಣೆಗೆ ಧಾವಿಸಿದ್ದರು. ಆದರೆ ಮೂವರಿಗೂ ಈಜು ಬಾರದ ಕಾರಣ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ರೆಸಾರ್ಟ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ಯುವತಿಯರು ಒದ್ದಾಡುತ್ತಿರುವ ಮನಕಲುಕುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ರಾತ್ರಿ ಮಂಗಳೂರಿಗೆ ಆಗಮಿಸಿದ ಯುವತಿಯ ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ್ವಯ ಪೊಲೀಸರು, ವಾಝ್ಕೋ ಬೀಚ್ ರೆಸಾರ್ಟ್ ನ ಮಾಲೀಕ ಮತ್ತು ಮ್ಯಾನೇಜರನನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್  ಅಗರ್ವಾಲ್  ತಿಳಿಸಿದ್ದಾರೆ.

ಯುವತಿಯರ ಸಾವಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ರೆಸಾರ್ಟ್ ಗೆ ಬೀಗಮುದ್ರೆ ಜಡಿದಿದ್ದಾರೆ. ಟ್ರೇಡ್ ಲೈಸನ್ಸ್ ಹಾಗೂ ಟೂರಿಸಂ ಪರವಾನಗಿಯನ್ನು ಅಮಾನತ್ತಿನಲ್ಲಿ ಇಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್  ಹೇಳಿದರು.

error: Content is protected !!