ಮಂಡ್ಯ: ವಿರೋಧವನ್ನೂ ಲೆಕ್ಕಿಸದೆ ದಲಿತರು ಕಾಲಭೈರವೇಶ್ವರ ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದರು ಎಂಬ ಕಾರಣಕ್ಕೆ ಜಾತಿವಾದಿಗಳು, ಉತ್ಸವ ಮೂರ್ತಿಯನ್ನು ಹೊರತಂದು, ದೇವಾಲಯದ ನಾಮಫಲಕವನ್ನು ಎಸೆದಿರುವ ಅಮಾನುಷ ಸಾಮೂಹಿಕ ಕೃತ್ಯ ಹನಕೆರೆ ಗ್ರಾಮದಲ್ಲಿ ನಡೆದಿದೆ.
ಕಾಲಭೈರವೇಶ್ವರ ದೇಗುಲಕ್ಕೆ ಹಿಂದಿನಿAದಲೂ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ವರ್ಷಗಳಿಂದ ದಲಿತರು ಸಹ ಪ್ರವೇಶಿಸಿ ಪೂಜೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರು ದೇಗುಲ ಪ್ರವೇಶಿಸದಂತೆ ಗ್ರಾಮದಲ್ಲಿ “ಸವರ್ಣಿಯರು” ಎಂದು ಕರೆಸಿಕೊಳ್ಳುವ ಜನ ಪಟ್ಟು ಹಿಡಿದಿದ್ದರು. ಇದರಿಂದ 2 ಬಾರಿ ಮಾಜಿ ಶಾಸಕ ಎಂ. ಶ್ರೀನಿವಾಸ್ ಹಾಗೂ ತಾಲೂಕು ಅಧಿಕಾರಿಗಳಿಂದ ಶಾಂತಿ ಸಭೆ ನಡೆದಿತ್ತು. ಸಭೆಯಲ್ಲಿ “ಸವರ್ಣಿಯರು” ಎಂದು ಕರೆಸಿಕೊಳ್ಳುವವರು, ಒಪ್ಪಿಗೆ ಸೂಚಿಸದ್ದರಿಂದ ವಿವಾದ ಮುಂದುವರಿದಿತ್ತು.
ಭಾನುವಾರ ಪೊಲೀಸರ ಭದ್ರತೆಯೊಂದಿಗೆ ದಲಿತರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದ್ದರು. ಈ ವೇಳೆ “ಸವರ್ಣಿಯರು” ಎಂದು ಕರೆಸಿಕೊಳ್ಳುವವರು, ಮಾಜಿ ಶಾಸಕ ಎಂ. ಶ್ರೀನಿವಾಸ್, ಅಧಿಕಾರಿಗಳು, ಪೊಲೀಸರು ಮುಂದಾದರೂ ಸಫಲವಾಗಲಿಲ್ಲ. ಬಳಿಕ ಜಾತಿವಾದಿಗಳು ಅಸಮಾಧಾನ ವ್ಯಕ್ತಪಡಿಸಿ, ಉತ್ಸವ ಮೂರ್ತಿ ಯನ್ನು ಹೊತ್ತೂಯ್ದು ನಾವು ದೇವರ ಪೂಜೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ ಉತ್ಸವ ಮೂರ್ತಿ ಯನ್ನು ಕೊಠಡಿಯಿಂದ ಮತ್ತೆ ದೇವಾಲಯಕ್ಕೆ ತಂದು ಇರಿಸುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ಬಗ್ಗೆ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರದಾರ್ ಹೇಳಿಕೆ ನೀಡಿದ್ದು, ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎಂದು ನಮಗೆ ದೂರು ನೀಡಿದ್ದಾರೆ. ದಲಿತರು ತಮಗೆ ಪ್ರವೇಶ ಇಲ್ಲ ಎಂಬ ಬಗ್ಗೆ ನಮಗೆ ಮಾಹಿತಿ ಕೊಟ್ಟಿದ್ದರು. 4 ತಿಂಗಳ ಹಿಂದೆ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದರು. ಕೆಲವು ದಿನಗಳ ಹಿಂದೆ ಇಲ್ಲಿ ಸಮಸ್ಯೆ ಉಂಟಾಗಿದೆ. ಇದು ಮುಜುರಾಯಿ ದೇವಸ್ಥಾನವಾಗಿದ್ದು, ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಇದೆ ಎಂದರು.
ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗಪ್ಪ ಮಾತನಾಡಿ, 4 ತಿಂಗಳಿನಿAದ ಈ ಸಮಸ್ಯೆ ಇದೆ. ದಲಿತರ ದೇಗುಲ ಪ್ರವೇಶಕ್ಕೆ ಬಿಟ್ಟಿಲ್ಲ. 2 ಬಾರಿ ಸಭೆ ಮಾಡಿ ಗ್ರಾಮಸ್ಥರಿಗೆ ತಿಳಿಸಿದ್ದೇವೆ. ಗ್ರಾಮದಲ್ಲಿರುವ ವಿರೋಧದ ಬಗ್ಗೆ ಮಾಹಿತಿ ನೀಡಿದ್ದೇವೆ. ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.