ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾರು ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿಯಾದ ಘಟನೆ ನ.08ರ ತಡರಾತ್ರಿ ನಡೆದಿದೆ.
ದಾವಣಗೆರೆ ಮೂಲದ ಕಾರು ಚಾರ್ಮಾಡಿ ಕಡೆಯಿಂದ ಉಜಿರೆಯತ್ತ ತೆರಳುತ್ತಿದ್ದಾಗ, ಉಜಿರೆಯಿಂದ ಮುಂಡಾಜೆ ಕಡೆ ತೆರಳುತ್ತಿದ್ದ ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿವೆ. ಘಟನೆಯಲ್ಲಿ ರಿಕ್ಷಾ ಚಾಲಕ ದಿಡುಪೆಯ ಸತೀಶ್( 39) ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯ ಒಂದು ಬದಿಗೆ ಮಾತ್ರ ಡಾಂಬರೀಕರಣವಾಗಿದೆ. ಆದರೆ ಈ ಡಾಂಬರೀಕರಣವೂ ಅಲ್ಲಲ್ಲಿ ಹಾಳಾಗಿ, ಸಾಕಷ್ಟು ಹೊಂಡಗಳು ನಿರ್ಮಾಣವಾಗಿವೆ. ಇನ್ನೊಂದು ಬದಿಗೆ ಡಾಂಬರೀಕರಣ ನಡೆಸಲು ಸಿದ್ದತೆಯಾಗುತ್ತಿದ್ದು, ಈ ಕಾರಣದಿಂದ ಆ ಬದಿಯ ರಸ್ತೆಯಲ್ಲಿ ವಾಹನ ಸಂಚಾರ ಇರುವುದಿಲ್ಲ. ಹೀಗಾಗಿ ರಸ್ತೆಯು ತೀರಾ ಕಿರಿದಾಗಿದ್ದು ಅಘಾತಗಳು ಸಂಭವಿಸಲು ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.