ಸರ್ಕಾರಿ ನೌಕರರ ಸಂಘದ ಚುನಾವಣೆ: ಮತದಾರರ ಪಟ್ಟಿಯಿಂದ ಹಲವರ ಹೆಸರು ಕಾಣೆ..!: ನ್ಯಾಯಯುತ ಚುನಾವಣೆಗೆ ಆಗ್ರಹಿಸಿ ಬೆಳ್ತಂಗಡಿ ಠಾಣೆಗೆ ದೂರು

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ನೇ ಅವಧಿಯ ತಾಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿದ್ದು, ಆದರೆ ಮತದಾರರ ಪಟ್ಟಿಯಿಂದ ಹಲವರ ಹೆಸರು ಕಾಣೆಯಾಗಿದೆ. ಇದೀಗ ಪಟ್ಟಿಯಲ್ಲಿ ಹೆಸರು ಇಲ್ಲದ ಸದಸ್ಯರುಗಳು ಅಸಮಾಧಾನಗೊಂಡಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ 20 ವರ್ಷದಿಂದ ಸಕ್ರೀಯವಾಗಿರುವ ಸರಕಾರಿ ಉನ್ನತೀಕರಿಸಿದ ನಿಟ್ಟಡೆ ಶಾಲೆಯ ದೈಹಿಕ ಶಿಕ್ಷಕಿ ಆರತಿ ಹಾಗೂ ಶಿಕ್ಷಕ ಧರಣೇಂದ್ರ ಕೆ. ಜೈನ್ ಅವರು ನ.07ರಂದು ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ, ಕಳೆದ 20 ವರ್ಷಗಳಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು, ಇದರ ಬೆಳ್ತಂಗಡಿ ಶಾಖೆಯಲ್ಲಿ 2019ನೇ ಇಸವಿಯಿಂದ ಸದಸ್ಯರಾಗಿದ್ದು, ಪ್ರತೀ ವರ್ಷ ಚಂದಾ ಹಣವನ್ನು ತಮ್ಮ ವೇತನದಿಂದ ಕಡಿತಗೊಳಿಸಲಾಗಿರುತ್ತದೆ. ಸದ್ರಿ ವಾರ್ಷಿಕ ಚಂದಾ ಪಾವತಿ ಮಾಡಿದ್ದರೂ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸದೆ ಮತ್ತು 2024-29 ನೇ ಸಾಲಿನ ನಿರ್ದೇಶಕರ ಹುದ್ದೆಗೆ ನೀಡಿದ ಅರ್ಜಿಯನ್ನು ತಿರಸ್ಕರಿಸಿ ಅವಮಾನಿಸಲಾಗಿದೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿಯ ಅಧ್ಯಕ್ಷರಾದ ಜಯರಾಜ್ ಜೈನ್ ಮತ್ತು ಕಾರ್ಯದರ್ಶಿ ಗಂಗಾರಾಣಿಯವರು ನಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬೆಂಗಳೂರು ರವರಿಗೆ ನಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಇ-ಮೇಲ್ ಮಾಡಿದಾಗ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆ ಜಿಲ್ಲಾ ಸಂಘ ಮಂಗಳುರು ರವರಿಗೆ ಸೂಚಿಸಿರುತ್ತಾರೆ. ಜಿಲ್ಲಾ ಸಂಘದವರು ಹೆಸರನ್ನು ಸೇರಿಸಿ ನಮಗೆ ಇ-ಮೇಲ್ ಮಾಡಿರುತ್ತಾರೆ. ಸದ್ರಿ ಇ-ಮೇಲ್ ಪ್ರತಿಯನ್ನು ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಚುನಾವಣಾಧಿಕಾರಿ, ನಾರಾಯಣ ನಾಯ್ಕ ಅವರಿಗೆ ನೀಡಿದ್ದರೂ 6 & 8 ರಲ್ಲಿ ರಾಜ್ಯ ಕಛೇರಿಯ ಅನುಮೋದನೆ ಇರುವುದಿಲ್ಲ ಎಂದು ಹೇಳಿ ನಾನು ನಿರ್ದೇಶಕರ ಹುದ್ದೆಗೆ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿರುತ್ತಾರೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿಯ ಅಧ್ಯಕ್ಷರಾದ ಜಯರಾಜ್ ಜೈನ್ ಮತ್ತು ಕಾರ್ಯದರ್ಶಿ ಗಂಗಾರಾಣಿಯವರು ಅವಸರವಸರವಾಗಿ ಮತದಾರರ ಪಟ್ಟಿಯನ್ನು ತಯಾರಿಸಿ, ಉದ್ದೇಶಪೂರ್ವಕವಾಗಿ ಹೆಸರನ್ನು ಕೈ ಬಿಟ್ಟು ನಾವು ವಿನಂತಿಸಿಕೊಂಡರೂ ಹೆಸರನ್ನು ಸೇರಿಸದೆ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿರಿಸುತ್ತಾರೆ. ತಮ್ಮವರನ್ನು ಮಾತ್ರ ನಿರ್ದೇಶಕ ಮಂಡಳಿಗೆ ಸೇರಿಸುವ ಹುನ್ನಾರದಿಂದ ಹೆಸರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುತ್ತಾರೆ.

ಮತದಾನದ ಬಗ್ಗೆ ಎಲ್ಲಿಯೂ ಪೇಪರ್ ನೋಟಿಫಿಕೇಷನ್ ನೀಡಿರುವುದಿಲ್ಲ. ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ತಿಳಿಸಿರುವುದಿಲ್ಲ. ಪ್ರೆಸ್ ರಿಪೋರ್ಟ್ ನೀಡಿರುವುದಿಲ್ಲ. ಕರಪತ್ರ ಹಂಚಿರುವುದಿಲ್ಲ. ಬ್ಯಾನರ್ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಚುನಾವಣೆ ಬಗ್ಗೆ ಪ್ರಚಾರ ನಡೆಸಿರುವುದಿಲ್ಲ. ಚುನಾವಣೆ ಬಗ್ಗೆ ಮಾಹಿತಿಗಳನ್ನು ಕೇಳಿದಾಗ ನೀಡಿರುವುದಿಲ್ಲ. ಮಾಹಿತಿಗಳನ್ನು ನೀಡಲು ನಿರಾಕರಿಸಿರುತ್ತಾರೆ. ನಿರ್ದೇಶಕರ ಸ್ಥಾನಕ್ಕೆ ವಂಚಿಸಿ, ಅಧ್ಯಕ್ಷರು ಹಾಗೂ ಕಾರ್ಯದರ್ಶಿ ತಮ್ಮವರನ್ನು ಸೇರಿಸಿ ಅವಿರೋಧವಾಗಿ ಮಂಡಳಿ ರಚಿಸಿ ನಮಗೆ ಮೋಸ ಮಾಡಿರುತ್ತಾರೆ. ನಮ್ಮ ಹಾಗೆ ಇನ್ನೂ ಕೆಲವರು ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುತ್ತಾರೆ. ಅವರ ಹೆಸರನ್ನು ಹೊಸ ಮತದಾರರ ಪಟ್ಟಿಯಿಂದ ಕೈಬಿಟ್ಟು ತುಂಬಾ ಜನರಿಗೆ ಮೋಸ ಮಾಡಿರುತ್ತಾರೆ. ತಮ್ಮವರು ಮಾತ್ರ ಆಡಳಿತ ಮಂಡಳಿಯಲ್ಲಿ ಇರಬೇಕು ಎಂದು ಹಲವರನ್ನು ಉಳಿದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸದೆ ತುಂಬಾ ಅನ್ಯಾಯ ಮತ್ತು ಮೋಸ ಮಾಡಿರುತ್ತಾರೆ. ಇದರಿಂದಾಗಿ ನಮಗೆ ತುಂಬಾ ಅನ್ಯಾಯ ಮತ್ತು ಮಾನಸಿಕ ನಷ್ಟ ಉಂಟು ಮಾಡಿರುತ್ತಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹಾಗೂ ಚುನಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಚಂದಾ ಪಾವತಿ ಮಾಡಿದ ಎಲ್ಲರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ, 2024-2029ರ ನಿರ್ದೇಶಕರ ಮತ್ತು ಅಧ್ಯಕ್ಷರ ಚುನಾವಣೆಯನ್ನು ಕ್ರಮಬದ್ಧವಾಗಿ ಮುಂದಿನ ದಿನಗಳಲ್ಲಿ ನಡೆಸುವಂತೆ ಸುತ್ತೋಲೆ ಹೊರಡಿಸಬೇಕು, ಅನ್ಯಾಯಕ್ಕೆ ಪರಿಹಾರ ದೊರಕಿಸಿಕೊಡಬೇಕಾಗಿ ದೂರು ನೀಡಲಾಗಿದೆ.

error: Content is protected !!