ನೆಲಮಂಗಲ: ವಿಷಾನಿಲ ಸೇವನೆಯಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ದಾಬಸ್‌ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಅಕ್ಟೋಬರ್ 31ರ ಸಂಜೆÀ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾರ್ಖಾನೆಯೊಂದರ ಒಳಚರಂಡಿ ಸಂಸ್ಕರಣಾ ಘಟಕ ಸ್ವಚ್ಛಗೊಳಿಸಲು ಇಳಿದಿದ್ದ ತುಮಕೂರು ಜಿಲ್ಲೆ ಮಧುಗಿರಿಯ ಲಿಂಗರಾಜು (26), ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ನವೀನ್ (26) ಎಂಬವರು ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ
ಮೃತ ಯುವಕರು ಖಾಸಗಿ ಕಂಪನಿಯ ಉದ್ಯೋಗಿಗಳಾಗಿದ್ದು, ಎಸ್‌ಟಿಪಿ ಪ್ಲಾಂಟ್ ಅಪರೇಟರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಯು ಕಾರ್ಖಾನೆಯ ಕೊಳಚೆ ನೀರು ಸಂಸ್ಕರಣಾ ಘಟಕ ಸ್ವಚ್ಛಗೊಳಿಸುವ ಹೊರ ಗುತ್ತಿಗೆ ಪಡೆದಿದ್ದು, ಅ.31ರಂದು ನವೀನ್ ಮತ್ತು ಲಿಂಗರಾಜು ಘಟಕ ಸ್ವಚ್ಛಗೊಳಿಸುವ ಕೆಲಸಕ್ಕೆ ತೆರಳಿದ್ದರು. ಅಂದು ಇಬ್ಬರು ಸಂಸ್ಕರಣಾ ಘಟಕದ ತೊಟ್ಟಿಗೆ ಇಳಿದಿದ್ದು, ಅದರೊಳಗೆ ಸಂಗ್ರಹವಾಗಿದ್ದ ವಿಷಕಾರಿ ಅನಿಲ ಸೇವೆಯಿಂದ ಮೂರ್ಛೆ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ತೊಟ್ಟಿಯಲ್ಲಿ ವಿಷಾನಿಲ ಸಂಗ್ರಹವಾಗಿರುತ್ತದೆ ಎಂಬ ಮಾಹಿತಿ ತಿಳಿದಿದ್ದರೂ ಕಾರ್ಖಾನೆಯವರು ಯಾವುದೇ ಸುರಕ್ಷತಾ ಉಪಕರಣಗಳನ್ನು ನೀಡದೇ ಕಾರ್ಮಿಕರನ್ನು ಇಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನಾ ಸಂಬAಧ ಕಾರ್ಖಾನೆಯ ಸುರಕ್ಷತಾ ನಿಯಮಗಳ ಉಲ್ಲಂಘನೆ, ಯಾವುದೇ ಸುರಕ್ಷತೆಗಳನ್ನು ಕಾರ್ಮಿಕರಿಗೆ ನೀಡದೇ ನಿರ್ಲಕ್ಷ್ಯತೆ ವಹಿಸಿದ ಕಾರ್ಖಾನೆ ಮಾಲೀಕ ಮಯೂರ್ ಎಂಬವರನ್ನು ಖಾಸಗಿ ಕಂಪನಿ ಮಾಲೀಕ ರಮೇಶ್ ಹಾಗೂ ಸೈಟ್ ಉಸ್ತುವಾರಿ ಸಂತೋಷ್ ಎಂಬುವರನ್ನು ಬಂಧಿಸಲಾಗಿದೆ ಎಂದು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಹೇಳಿದ್ದಾರೆ.