ಬೆಳ್ತಂಗಡಿ : ವೇತನ ಹೆಚ್ಚಳ ಮಾಡಲು ಮತ್ತು 3 ತಿಂಗಳ ಬಾಕಿ ವೇತನ ಪಾವತಿಸಲು ಒತ್ತಾಯಿಸಿ ಅ.28ರಂದು ಬೆಳ್ತಂಗಡಿ ತಾಲೂಕು ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ಅಡುಗೆ ನೌಕರರ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕ ಮುಖಂಡ, ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ ರಾಜ್ಯ, ಕೇಂದ್ರ ಸರಕಾರಗಳ ಬಡವರ ವಿರೋಧಿ, ಕಾರ್ಮಿಕ ವಿರೋಧಿ ಮಹಿಳಾ ವಿರೋಧಿ ಆಡಳಿತ ವೈಖರಿಯನ್ನು ಟೀಕಿಸಿ ಬಿಸಿಯೂಟ ಅಡುಗೆ ನೌಕರರ ಬೇಡಿಕೆಗಳು ಕೂಡಲೇ ಈಡೇರದಿದ್ದಲ್ಲಿ ನವೆಂಬರ್ 7ರಿಂದ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅಡುಗೆ ಬಂದ್ ಮಾಡಿ ತಾಲೂಕು ಕಚೇರಿ ಎದುರು ಅನಿರ್ದಿಷ್ಟ ಕಾಲ ಸಂಬಳ ಸಿಗುವವರೆಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಎಂದು ಎಚ್ಚರಿಕೆ ನೀಡಿದರು.
ಶಾಸಕರು, ಮಂತ್ರಿಗಳಿಗೆ ಲಕ್ಷಗಟ್ಟಲೆ ಸಂಬಳ ಕೊಡಲು ಹಣವಿದೆ, ಕಾಳಜಿಯೂ ಇದೆ, ಬಡ ಮಹಿಳೆಯರ ಬಿಸಿಯೂಟ ನೌಕರರ ಸಂಬಳ ಕೊಡಲು ಹಣವೂ ಇಲ್ಲ, ಸಮಯವೂ ಇಲ್ಲ, ಕಾಳಜಿಯೂ ಇಲ್ಲ ಎಂದು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಮುಖಂಡರಾದ ಜಯರಾಮ ಮಯ್ಯ, ದಲಿತ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಸಮತಿ ಸದಸ್ಯೆ ಈಶ್ವರಿ, ಶಂಕರ್ ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಬಿಸಿಯೂಟ ನೌಕರರ ಹಕ್ಕೊತ್ತಾಯಗಳು ಮತ್ತು ಬೇಡಿಕೆಗಳು
ಕಳೆದ 3 ತಿಂಗಳಿಂದ ದುಡಿದ ವೇತನ ಬಾರದೆ ಕಷ್ಟ ಪಡುತ್ತಿದ್ದೇವೆ. ಕೊಡುವ ಮಾಸಿಕ ಕೇವಲ ರೂ. 3,600 ಸಂಬಳವನ್ನೂ ಈ ರೀತಿ ನೀಡದೆ, ಸತಾಯಿಸುವುದು, ಮಾನವ ಹಕ್ಕುಗಳ ಉಲ್ಲಂಘನೆಯೂ, ದುಡಿಮೆ ತಕ್ಕ ವೇತನ ನೀಡದ ಅನ್ಯಾಯವೂ ಆಗುತ್ತದೆ. ತಕ್ಷಣ ನಮ್ಮ ಎಲ್ಲಾ ಬಾಕಿ ಸಂಬಳವನ್ನು ಬಿಡುಗಡೆ ಮಾಡಬೇಕು, ನಿರಂತರ ಬೆಲೆ ಏರಿಕೆ ಆಗುತ್ತಿದ್ದರು ಅಕ್ಷರದಾಸೋಹ ನೌಕರರಿಗೆ ವೇತನ ಹೆಚ್ಚಳ ಮಾಡಿರುವುದಿಲ್ಲ, ಕೂಡಲೇ ಕನಿಷ್ಠ ರೂ15,000 ಮಾಸಿಕ ವೇತನ ನೀಡಬೇಕು, ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4 ಗಂಟೆ ಎಂದಿದೆ. ನಾವು ದಿನಕ್ಕೆ 6 ಗಂಟೆಗೆ ಹೆಚ್ಚು ಕೆಲಸ ಮಾಡುವುದರಿಂದ ಅದನ್ನು 6 ಗಂಟೆ ಎಂದು ಬದಲಾಯಿಸಬೇಕು, ಅಕ್ಷರದಾಸೋಹ ಯೋಜನೆಯನ್ನು ಸಂಪೂರ್ಣ ಶಿಕ್ಷಣ ಇಲಾಖೆಯಡಿಯಲ್ಲಿಯೇ ನಡೆಸಬೇಕು.
ಸಾದ್ವಿಲಾರು ಜಂಟಿ ಖಾತೆಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್.ಡಿ.ಎಂ.ಸಿ. ಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸಾಗಬೇಕು, ಸಾದ್ವಿಲಾರು ಖಾತೆ ಮೊದಲಿನಂತೆಯೇ ಬದಲಾಯಿಸಬೇಕು, ಇಡುಗಂಟು ಕೊಡುವ ಯೋಜನೆಗೆ ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕಿಯೂ ಇನ್ನೂ ಜಾರಿಯಾಗಿಲ್ಲ ತಕ್ಷಣ ಜಾರಿ ಮಾಡಬೇಕು.,
ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ಯಾವುದೇ ಸ್ವರೂಪದ ಜವಬ್ಧಾರಿ ನೀಡಬಾರದು.