ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಗುಡಿಸಲು ಧ್ವಂಸ: 98 ಅಪರಾಧಿಗಳಿಗೆ ‘ಜೀವಾವಧಿ’ ಶಿಕ್ಷೆ: ಐತಿಹಾಸಿಕ ತೀರ್ಪು ಪ್ರಕಟಿಸಿದ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ಕೊಪ್ಪಳ: ದೇಶದಲ್ಲಿ ದಲಿತರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ಅದು ನ್ಯಾಯಯುತವಾಗಿ ಕೊನೆಯಾಗುವ ಬದಲು ಸಂದಾನದಲ್ಲಿ ಮುಗಿದು ಬಿಡುತ್ತದೆ. ಆದರೆ ಅ.24ರಂದು ಮಾತ್ರ ದಲಿತರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಇಡೀ ದೇಶವೇ ತಿರುಗಿ ನೋಡುವಂತೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ ಅವರು ಐತಿಹಾಸಿಕ ತೀರ್ಪು ನೀಡಿದ್ದಾರೆ.

ದಲಿತರ ಮೇಲೆ ಹಲ್ಲೆ, ಧ್ವಂಸ, ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ‘ಜೀವಾವಧಿ’ ಶಿಕ್ಷೆ ನೀಡಲಾಗಿದೆ. ಇನ್ನುಳಿದ ಮೂವರಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹ 2000 ರೂಪಾಯಿ ದಂಡ ವಿಧಿಸಲಾಗಿದೆ.

ಘಟನೆಯ ಹಿನ್ನಲೆ 

2014ರಲ್ಲಿ ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಕ್ಷೌರದಂಗಡಿಗೆ ಮತ್ತು ಹೋಟೆಲ್ ಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ ವಿಚಾರವಾಗಿ ಜಗಳ ನಡೆದು ಬಳಿಕ ಪೊಲೀಸ್ ಅಧಿಕಾರಿಗಳು ಮುರುಕುಂಬಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೇ ಕೋಪದಿಂದ “ಸರ್ವಣೀಯರು” ಎಂದು ಕರೆಸಿಕೊಳ್ಳುವ ಜನ ರಾತ್ರಿ ಸಮಯದಲ್ಲಿ ದಲಿತರ ಕೇರಿಗೆ ನುಗ್ಗಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿ ಗ್ರಾಮದ 117 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕಳೆದ ಅಕ್ಟೋಬರ್ 21ರಂದು ಜಿಲ್ಲಾ ನ್ಯಾಯಾಧೀಶರು ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಾಗಲು ಸೂಚಿಸಿದ್ದರು. 117 ಅಪರಾಧಿಗಳ ಪೈಕಿ 101 ಅಪರಾಧಿಗಳು ಕೋರ್ಟ್ಗೆ ಹಾಜರಾಗಿದ್ದರು. ಉಳಿದ 16 ಅಪರಾಧಿಗಳು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ನೀಡಿರುವ ಹಿನ್ನೆಲೆ 101 ಅಪರಾಧಿಗಳ ವಿರುದ್ಧ ಇರುವ ದಾಖಲೆ ಪರಿಶೀಲಿಸಿದ ನ್ಯಾಯಾಧೀಶರು, ಅಕ್ಟೋಬರ್ 21ರಂದು ಎಲ್ಲಾ ಅಪರಾಧಿಗಳ ವಿರುದ್ಧ ಆರೋಪ ಸಾಬೀತುಪಡಿಸಿ ನ್ಯಾಯಾಂಗ ಬಂಧಕ್ಕೆ ನೀಡಿ ಅಕ್ಟೋಬರ್ 24ಕ್ಕೆ ಶಿಕ್ಷೆ ಪ್ರಕಟಿಸುವುದಾಗಿ ಕಾಯ್ದಿರಿಸಿದ್ದರು.
ಎಲ್ಲಾ ಅಪರಾಧಿಗಳ ಮೇಲೆ ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡಿದ್ದಾರೆ. ಶಿಕ್ಷೆಗೆ ಒಳಪಟ್ಟ ಎಲ್ಲಾ ಅಪರಾಧಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಜಿಲ್ಲಾ ಕಾರಾಗೃಹಕ್ಕೆ ಹಾಜರು ಪಡಿಸಿದ ಪೊಲೀಸರು ಬಳ್ಳಾರಿ ಜೈಲಿಗೆ ನಿನ್ನೆ ರಾತ್ರಿಯೇ ಸ್ಥಳಾಂತರ ಮಾಡಿದ್ದಾರೆ.

 

 

 

ಕಣ್ಣೀರಿಟ್ಟ ಅಪರಾಧಿಗಳ ಕುಟುಂಬಸ್ಥರು

 

ಜೀವಾವಧಿ ಶಿಕ್ಷೆಯ ತೀರ್ಪು ಹೊರ ಬರುತ್ತಿದ್ದಂತೆ ಅಪರಾಧಿಗಳ ಕುಟುಂಬಸ್ಥರು ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟಿದ್ದಾರೆ. ಮಹಿಳೆಯರು, ಮಕ್ಕಳು, ಯುವಕರು ಗ್ರಾಮದ ಮುಖಂಡರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ, ತಪ್ಪು ಮಾಡದವರಿಗೆ ಯಾಕೆ ಶಿಕ್ಷೆ ಕೊಡುತ್ತಾರೆ. 9 ವರ್ಷಗಳ ನಂತರ ಯಾಕೆ ಶಿಕ್ಷೆ ಕೊಡುತ್ತಿದ್ದಾರೆ. ನಾವೆಲ್ಲರೂ ಗ್ರಾಮದಲ್ಲಿ ಒಂದಾಗಿದ್ದೀವಿ. ಇದೀಗ ಯಾವುದೇ ಅಂತಹ ವಾತಾವರಣ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

 

ಪ್ರಕರಣದ ತೀರ್ಪು ಪ್ರಕಟವಾದ ಬೆನ್ನಲ್ಲೇ ಗಂಗಾವತಿ ಪೊಲೀಸರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಲ್ಲದೇ, ಡಿಪಿಎಸ್ ಸೇರಿದಂತೆ ಇಡೀ ಪೊಲೀಸ್ ಪಡೆಯೇ ಗ್ರಾಮದಲ್ಲಿ ರಾತ್ರಿ ಠಿಕಾಣಿ ಹೂಡಿದೆ. ಗ್ರಾಮದಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

 

 

 

 

error: Content is protected !!