ಕಡಬ: ಮಸೀದಿ ಆವರಣದಲ್ಲಿ ‘‘ಜೈ ಶ್ರೀ ರಾಮ್’’ ಘೋಷಣೆ: ಇಬ್ಬರು ಆರೋಪಿಗಳ ಪ್ರಕರಣವನ್ನು ರದ್ದುಪಡಿಸಿದ ಹೈಕೋರ್ಟ್:“ಜೈ ಶ್ರೀರಾಮ್” ಘೋಷಣೆ ಧಾರ್ಮಿಕ ಭಾವನೆಗಳನ್ನು ಹೇಗೆ ಕೆರಳಿಸುತ್ತದೆ? ಕೋರ್ಟ್ ಪ್ರಶ್ನೆ

ಕಡಬ: ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಪ್ರವೇಶಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಬಂಧ, ಪುತ್ತೂರು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್‌ಸಿ ಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣವನ್ನು ರದ್ದುಪಡಿಸುವಂತೆ ಬಿಳಿನೆಲೆ ಗ್ರಾಮದ ಯುವಕರಾದ ಕೀರ್ತನ್ ಕುಮಾರ್ ಹಾಗೂ ಎನ್.ಎಂ.ಸಚಿನ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: 2023ರ ಸೆ. 24ರಂದು ರಾತ್ರಿ ಐತ್ತೂರು ಗ್ರಾಮದ ಮರ್ಧಾಳ ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯ ಆವರಣದಲ್ಲಿ ಅಪರಿಚಿತರು ಅಕ್ರಮವಾಗಿ ಪ್ರವೇಶಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದು, “ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ” ಎಂದು ಬೊಬ್ಬೆ ಹಾಕಿದ್ದಾರೆ ಎಂದು ಆರೋಪಿಸಿ ಸಿ.ಎಂ.ಹೈದರ್ ಅಲಿ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಆರೋಪಿಗಳಿಬ್ಬರ ವಿರುದ್ಧ ಸೆಕ್ಷನ್ ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ, ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು, ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ, ಸಾಮಾನ್ಯ ಉದ್ದೇಶ ಮತ್ತು 295-ಎ ಸೇರಿದಂತೆ ವಿವಿಧ ಐಪಿಸಿ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, “ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತದೆ ಎಂಬ ವಾದ ಅರ್ಥವಾಗುತ್ತಿಲ್ಲ” ಎಂದಿದೆ.

“ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 295-ಎ ಅಡಿ ಪ್ರಕರಣ ದಾಖಲಿಸಲಾಗಿದೆ. ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲವೇ ದುರುದ್ದೇಶಪೂರ್ವಕವಾಗಿ ಕೆರಳಿಸುವ ಕೃತ್ಯವನ್ನು ಐಪಿಸಿ ಸೆಕ್ಷನ್ 295-ಎ ಹೇಳುತ್ತದೆ. ಆದರೆ, ಯಾರಾದರೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಅದು ಇನ್ಯಾವುದೋ ವರ್ಗದ ಧಾರ್ಮಿಕ ಭಾವನೆಗಳನ್ನು ಹೇಗೆ ಕೆರಳಿಸುತ್ತದೆ ಎಂದು ಅರ್ಥವಾಗುತ್ತಿಲ್ಲ” ಎಂದು ಪೀಠ ಹೇಳಿದೆ.

“ಕಡಬ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ಖುದ್ದು ದೂರುದಾರರೇ ಹೇಳಿದ್ದಾರೆ. ಹೀಗಿರುವಾಗ, ಇಂತಹ ಘಟನೆ ಆ ಪ್ರದೇಶದಲ್ಲಿ ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಕಲ್ಪಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶವಿಲ್ಲ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

“ಆರೋಪಿಗಳ ವಿರುದ್ಧ ಕಿಡಿಗೇಡಿತನ, ಸಮಾಜದಲ್ಲಿ ಬಿರುಕು ಮೂಡಿಸುವುದು, ಅತಿಕ್ರಮ ಪ್ರವೇಶ ಹಾಗೂ ಬೆದರಿಕೆ ಆರೋಪಗಳನ್ನು ಮಾಡಲಾಗಿದೆ. ಆದರೆ, ದೂರು, ವಕೀಲರ ವಾದ ಮತ್ತು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಅಂತಹ ಆರೋಪಗಳಿಗೆ ಯಾವುದೇ ಪುರಾವೆಗಳು ಕಾಣುತ್ತಿಲ್ಲ. ಹೀಗಿದ್ದಾಗ, ಆರೋಪಿಗಳ ವಿರುದ್ಧದ ಪ್ರಕರಣ ಮುಂದುವರೆಸುವುದು ಕಾನೂನಿನ ದುರ್ಬಳಕೆ ಆಗಲಿದೆ” ಎಂದಿರುವ ನ್ಯಾಯಾಲಯ, ಇಬ್ಬರು ಯುವಕರ ಅರ್ಜಿಯನ್ನು ಮಾನ್ಯ ಮಾಡಿ, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

error: Content is protected !!