ಹೊಸದಿಲ್ಲಿ: ಹೆಲಿಕಾಪ್ಟರ್ ಪತನಗೊಂಡ ಘಟನೆಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ಕರಾವಳಿ ಕಾವಲು ಪಡೆಯ ಯೋಧರೊಬ್ಬರ ಮೃತದೇಹ ಒಂದು ತಿಂಗಳ ಬಳಿಕ ಅ.10ರಂದು ಪತ್ತೆಯಾಗಿದೆ.
ಸೆಪ್ಟೆಂಬರ್ 2ರಂದು ಅರಬ್ಬೀ ಸಮುದ್ರದಲ್ಲಿ ಪತನಗೊಂಡಿದ್ದALH MK-III ಹೆಲಿಕಾಪ್ಟರ್ ನಲ್ಲಿ ಇನ್ನಿತರ ನಾಲ್ವರೊಂದಿಗೆ ಕಮಾಂಡರ್ ರಾಕೇಶ್ ಕುಮಾರ್ ರಾಣಾ ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಪತನಗೊಂಡ ಬೆನ್ನಿಗೇ, ಓರ್ವ ಹೆಲಿಕಾಪ್ಟರ್ ಸಿಬ್ಬಂದಿಯನ್ನು ರಕ್ಷಿಸಿ, ಉಳಿದಿಬ್ಬರಾದ ಕಮಾಂಡರ್ (ಜೆಜಿ) ವಿಪಿನ್ ಬಾಬು ಹಾಗೂ ಪ್ರಧಾನ ನಾವಿಕ ಕರಣ್ ಸಿಂಗ್ ಮೃತದೇಹಗಳು ಪತ್ತೆಯಾಗಿತ್ತು.
ಆದರೆ ಕಮಾಂಡರ್ ರಾಕೇಶ್ ಕುಮಾರ್ ರಾಣಾ ಪತ್ತೆಯಾಗಿರಲಿಲ್ಲ. ಹೆಲಿಕಾಪ್ಟರ್ ಪತನಗೊಂಡ ನಂತರ ಭಾರತೀಯ ಕರಾವಳಿ ಕಾವಲು ಪಡೆಯು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತಾದರೂ ಇವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ನಿನ್ನೆ ಗುಜರಾತ್ ನ ನೈರುತ್ಯ ಪೋರಬಂದರ್ ನಿಂದ 55 ಕಿಮೀ ದೂರದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.