ದಸರಾ ಸಂಭ್ರಮ: ಊರಿಗೆ ಹೋಗೋರಿಗೆ ಸಂಕಷ್ಟ: ಹೆಚ್ಚಾಗಿದೆ ಖಾಸಗಿ ಬಸ್‌ಗಳ ಟಿಕೆಟ್ ದರ: ಬೆಂಗಳೂರು- ಮಂಗಳೂರು ಟಿಕೆಟ್ ಎಷ್ಟು ಗೊತ್ತಾ..?

ಬೆಂಗಳೂರು: ಗೌರಿ ಗಣೇಶ, ದಸರಾ, ದೀಪಾವಳಿ ಸಾಲು ಸಾಲು ಹಬ್ಬಗಳು. ವಾರದ ಕೊನೆಯಲ್ಲಿ ಹಬ್ಬ ಬಂತು ಅಂದ್ರೆ ಸರಕಾರಿ ರಜೆಯ ಜೊತೆಗೆ ವಾರದ ಭರ್ಜರಿ ರಜೆಯೂ ಸಿಗುತ್ತದೆ. ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ದೂರದ ಊರುಗಳಿಂದ ಜನ ತಮ್ಮೂರಿಗೆ ಮರಳುತ್ತಾರೆ. ಸದ್ಯ ಹಬ್ಬಕ್ಕೆಂದು ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲಕರು ಶಾಕ್ ನೀಡಿದ್ದಾರೆ.
ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಂಡುಬಂದಿದೆ. ಬೆಂಗಳೂರಿನಿಂದ ಬೇರೆ-ಬೇರೆ ಕಡೆಗೆ ಜನ ಹೊರಟು ನಿಂತಿದ್ದರು. ಆದರೆ ಖಾಸಗಿ ಬಸ್‌ಗಳಲ್ಲಿ ಟಿಕೆಟ್ ದರ ದುಪ್ಪಟ್ಟು ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಕಂಗಾಲಾಗಿದ್ದರು.

ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸುಗಳ ಸಾಮಾನ್ಯ ಟಿಕೆಟ್ ದರ 630-1450 ರೂ. ಆದರೆ ಹಬ್ಬದ ಕಾರಣಕ್ಕೆ ಖಾಸಗಿ ಬಸ್ಸುಗಳ ಈಗಿನ ಟಿಕೆಟ್ ದರ 1200-2700 ರೂ ಆಗಿದೆ.

ದರ ಏರಿಕೆ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖಾಸಗಿ ಬಸ್ ಮಾಲೀಕರು  “ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರು ಬೀದಿಗೆ ಬಂದಿದ್ದೇವೆ. ಮೊದಲು ಶಕ್ತಿ ಯೋಜನೆಯನ್ನು ನಿಲ್ಲಿಸಿ. ನಾವು ಮಾತ್ರ ಅಲ್ಲ ಕೆಎಸ್ಆರ್‌ಟಿಸಿ ಬಸ್ಸಿನವರು ಕೂಡ ಟಿಕೆಟ್ ದರ ಹೆಚ್ಚಳ ಮಾಡುತ್ತಾರೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಆರ್‌ಟಿಒ ಅಧಿಕಾರಿಗಳು, ಸುಳ್ಳು ಕೇಸ್‌ಗಳನ್ನು ದಾಖಲಿಸಿ ನಮಗೆ ತೊಂದರೆ ಕೊಡುತ್ತಾರೆ” ಎಂದು ಆರೋಪಿಸಿದ್ದಾರೆ

ಈ ಬಾರಿಯ ದಸರಾ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಒಂದೆಡೆ ಖಾಸಗಿ ಬಸ್ಸುಗಳು ದರ ಏರಿಕೆ ಮಾಡಿ ಶಾಕ್ ನೀಡಿದೆ. ಆದರೆ ಅತ್ತ ಕಡೆ ಕೆಎಸ್ ಆರ್ ಟಿ ಸಿ ಎರಡು ಸಾವಿರ ಬಸ್‌ಗಳ ಹೆಚ್ಚುವರಿ ನಿಯೋಜನೆ ಮಾಡಿ ಸ್ವಲ್ಪ ರಿಲೀಫ್ ನೀಡಿದೆ.

error: Content is protected !!