ಬೆಂಗಳೂರು: ಮಾತನಾಡೋ ಮುಂಚೆ ನೂರು ಬಾರಿ ಯೋಚಿಸಿ ಮಾತನಾಡಬೇಕು ಎಂದು ಹಿರಿಯರು ಹೇಳುವ ಮಾತುಗಳು, ಗಾದೆ ಮಾತುಗಳು ಸಾರ್ವಕಾಲಿಕ. ಮಾತಿನಲ್ಲಿ ಮಾಡಿಕೊಂಡ ಎಡವಟ್ಟು ಜನರನ್ನು ಎಲ್ಲಿ ಬೇಕಾದರೂ ತಂದಿಡಬಹುದು. ಅಂತ ಎಡವಟ್ಟು ಮಾಡಿಕೊಂಡ ಹಾಸ್ಯ ನಟರೊಬ್ಬರ ಮೇಲೆ ಜಾತಿ ನಿಂದನೆ ದೂರು ದಾಖಲಾಗಿದೆ.
‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್‌ನ ವಿನ್ನರ್ ಹಾಸ್ಯ ನಟ ‘ಹುಲಿ’ ಕಾರ್ತಿಕ್ ಅವರು ಒಂದು ಸಮುದಾಯವನ್ನ ಹೀಗಳೆಯುವ ರೀತಿಯಲ್ಲಿ ಮಾತನಾಡಿ ಎಡವಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ‘ಅನುಬಂಧ ಅವಾರ್ಡ್’ ಕಾರ್ಯಕ್ರಮದಲ್ಲಿ ಬಳಕೆ ಮಾಡಿದ ಪದವು ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.
ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿ ಎ-1 ಹುಲಿ ಕಾರ್ತಿಕ್, ಎ-2 ಅನುಬಂಧ ಸ್ಕ್ರಿಪ್ಟ್ ರೈಟರ್, ಎ-3 ಅನುಬಂಧ ಡೈರೆಕ್ಟರ್, ಎ-4 ನಿರ್ಮಾಪಕನ ವಿರುದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.