ಬೆಂಗಳೂರು: ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ, ತಲುಪಿಸುವ ಉದ್ದೇಶದಿಂದ ಗ್ರಾಮ ಸಭೆಗಳು ನಡೆಯುತ್ತಿದ್ದು ಇದೀಗ ಈ ಸಭೆಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಈ ಕುರಿತು ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗ್ರಾಮಗಳ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತಿಗಳು ಜನವಸತಿ ಸಭೆ, ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳನ್ನು ನಡೆಸುವುದು ಕಡ್ಡಾಯವಾಗಿದೆ. ಈ ಸಂಬAಧ ಕಾರ್ಯಾಚರಣೆ ವಿಧಾನದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದಿರುವ ಅವರು, ಗ್ರಾಮಸಭೆ ಸೇರುವ 1ತಿಂಗಳು ಮೊದಲೇ ಜನವಸತಿ ಸಭೆ ಹಾಗೂ ವಾರ್ಡ್ ಸಭೆಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ನಡೆಸಬೇಕು. ಒಂದು ವರ್ಷದಲ್ಲಿ ಎರಡು ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ಜವಾಬ್ದಾರಿ ನಕ್ಷೆಯನುಸಾರ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ ಎಂದಿದ್ದಾರೆ.
ಪ್ರತಿ ಆರ್ಥಿಕ ವರ್ಷದಲ್ಲಿ ಜನವರಿ ಮಾಹೆಯ 26, ಏಪ್ರಿಲ್ ಮಾಹೆಯ 24, ಆಗಸ್ಟ್ ಮಾಹೆಯ 15 ಮತ್ತು ಅಕ್ಟೋಬರ್ ಮಾಹೆಯ 2ರಂದು ಕಡ್ಡಾಯವಾಗಿ ಗ್ರಾಮ ಸಭೆಗಳನ್ನು ಆಯೋಜಿಸಲು ಸೂಚಿಸಲಾಗಿದ್ದು ವರ್ಷದಲ್ಲಿ ಒಂದು ವಿಶೇಷ ಮಹಿಳಾ ಗ್ರಾಮಸಭೆ ಮತ್ತು ಒಂದು ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ ಎಂದಿದ್ದಾರೆ.
ಗ್ರಾಮ ಸಭೆಗಳನ್ನು ಆಯೋಜಿಸುವ ಸಂಬAಧ ತಾ.ಪಂ ಕಾರ್ಯಾನಿರ್ವಾಹಕ ಅಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನೂ ಸಹ ಈ ಮಾರ್ಗಸೂಚಿಯಲ್ಲಿ ವಿವರಿಸಲಾಗಿದ್ದು, ತಾಲೂಕು ಪಂಚಾಯತಿಗಳ ಕಾರ್ಯಾನಿರ್ವಾಹಕ ಅಧಿಕಾರಿಗಳು ತಮ್ಮ ಜವಾಬ್ದಾರಿಯಲ್ಲಿ ಲೋಪವಾಗದಂತೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಗ್ರಾಮಸಭೆಗಳನ್ನು ನಡೆಸುವಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಅತಿ ಮುಖ್ಯವಾಗಿದ್ದು, ಜನವಸತಿ, ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳಲ್ಲಿ ಹೆಚ್ಚು ಮಂದಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಬೇಕು ಎಂದಿದ್ದಾರೆ.
ಗ್ರಾಮ ಪಂಚಾಯತ್ ಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಮತ್ತು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.