ಶಿರೂರು: ಗಂಗಾವಳಿ ನದಿಯಲ್ಲಿ ತೆರವಾಗದ ಮಣ್ಣು: ಪ್ರವಾಹ ಎದುರಾಗುವ ಭೀತಿಯಲ್ಲಿ ಸ್ಥಳೀಯರು: ಮಣ್ಣು ತೆರವಾಗದಿದ್ದರೆ ಗುಡ್ಡ ಕುಸಿತವಾದ ಜಾಗದಲ್ಲಿ ಧರಣಿ..!


ಉತ್ತರಕನ್ನಡ : ಅಂಕೋಲಾದ ಶಿರೂರು ಬಳಿ ಜು.16ರಂದು ಸಂಭವಿಸಿದ ಗುಡ್ಡ ಕುಸಿತದಲ್ಲಿ ಇನ್ನೂ ಕೂಡ ಇಬ್ಬರ ಮೃತದೇಹ ಪತ್ತೆಯಾಗಿಲ್ಲ. ಈವರೆಗೆ ಮೂರು ಹಂತದ ಕಾರ್ಯಾಚರಣೆ ನಡೆಸಿದರೂ ಲಾರಿ ಚಾಲಕ ಅರ್ಜುನ್ ಮೃತದೇಹ ಮಾತ್ರ ಪತ್ತೆಯಾಗಿದೆ. ಈ ಮಧ್ಯೆ ಗಂಗಾವಳಿ ನದಿಯಲ್ಲಿ ತುಂಬಿರುವ ಮಣ್ಣು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಶಿರೂರು ಬಳಿ ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಮಣ್ಣು ಹಾಗೆಯೇ ಉಳಿದುಕೊಂಡಿದೆ. ಈ ಮಣ್ಣಿನ ರಾಶಿಯಿಂದಾಗಿ ನದಿಯಲ್ಲಿ ಕೃತಕ ದ್ವೀಪವೇ ಸೃಷ್ಟಿಯಾಗಿದೆ. ಇದು ನದಿಯಲ್ಲಿ ಸರಾಗವಾಗಿ ಹರಿಯುವ ನೀರಿಗೆ ತಡೆಗೋಡೆಯಾದಂತಾಗಿದೆ. ಮಣ್ಣು ತೆರವು ಮಾಡದೆ ಇದ್ದರೆ ವಾಸರಕುದ್ರಿಗೆ, ಮೊಗಟಾ, ಅಗಸೂರು, ಹಿಲ್ಲೂರು, ಸಗಡಗೇರಿ, ಬೆಳಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದ ಸಮಯದಲ್ಲಿ ಸ್ವಲ್ಪ ಮಳೆಯಾದರೂ ಪ್ರವಾಹ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಮುಂದಾಗುವ ಅನಾಹುತದ ಬಗ್ಗೆ ಎಚ್ಚೆತ್ತ ಸ್ಥಳೀಯರು ಮಣ್ಣನ್ನು ತೆರವುಗೊಳಿಸುವಂತೆ ಕೇಳಿಕೊಂಡಿದ್ದಾರೆ. ಒಂದು ವೇಳೆ ಈ ಮಣ್ಣನ್ನು ತೆರವುಗೊಳಿಸದೆ ಇದ್ದಲ್ಲಿ ಎಲ್ಲ ಸಾರ್ವಜನಿಕರೂ ಸೇರಿ ಶಿರೂರು ಹತ್ತಿರ ಗುಡ್ಡ ಕುಸಿತವಾದ ಜಾಗದಲ್ಲಿ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!