ನವದೆಹಲಿ: ಯಾವುದೇ ಜೈಲಿನಲ್ಲಿರುವ ವ್ಯಕ್ತಿಗೆ ಘನತೆಯನ್ನು ನೀಡದಿರುವುದು ಪೂರ್ವ ವಸಾಹತು ಶಾಹಿ ವ್ಯವಸ್ಥೆಯಾಗಿದೆ. ಜೈಲಿನಲ್ಲಿ ಜಾತಿ ಆಧಾರಿತ ತಾರತಮ್ಯ ಸಹಿಸಲು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ನ್ಯಾ ಜೆಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ಈ ಆದೇಶ ನೀಡಿದ್ದು, ಈ ಸಂಬAಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಹುಟ್ಟಿನಿಂದಲೂ ಎಲ್ಲರೂ ಸಮಾನರು ಎಂಬುದನ್ನು ಸಂವಿಧಾನದ 17ನೇ ವಿಧಿ ತಿಳಿಸುತ್ತದೆ. ವ್ಯಕ್ತಿಯ ಸ್ಥಿತಿ, ಜಾತಿ, ಸ್ಪರ್ಶದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಹೇಳುತ್ತದೆ. ಜಾತಿ ಪೂರ್ವಾಗ್ರಹಗಳು ಮತ್ತು ತಾರತಮ್ಯವು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಸಂವಿಧಾನವು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಕೊನೆಗಾಣಿಸುವಂತೆ ತಿಳಿಸುತ್ತದೆ. ಜೈಲಿನಲ್ಲಿ ಇರುವವರು ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ. ಇಂತಹ ದಬ್ಬಾಳಿಕೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ತೆಗೆದು ಹಾಕಬೇಕಿದೆ. ಸ್ವಾತಂತ್ರ‍್ಯ ಬಂದು 75 ವರ್ಷಗಳಾದರೂ ನಾವು ಜಾತಿ ತಾರತಮ್ಯ ತೊಡೆದುಹಾಕಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
ಜೈಲಿನಲ್ಲಿರುವ ಖೈದಿಗಳು ಮತ್ತು ವಿಚಾರಣಾಧೀನ ಖೈದಿಗಳ ರಿಜಿಸ್ಟರ್‌ನಲ್ಲಿರುವ ಜಾತಿ ಆಧಾರಿತ ಯಾವುದೇ ಉಲ್ಲೇಖ ಮತ್ತು ಜಾತಿ ಕಾಲಂ ಅನ್ನು ತೆಗೆದು ಹಾಕಬೇಕು ಎಂದಿದೆ. ಮಾದರಿ ಜೈಲು ಕೈಪಿಡಿ 2016 ಮತ್ತು ಮಾದರಿ ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳ ಕಾಯಿದೆ 2023 ರಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸಲು ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಜಾತಿ ಆಧಾರಿತ ತಾರತಮ್ಯ, ಕೆಲಸದ ವಿಭಜನೆ, ಬ್ಯಾರಕ್‌ಗಳ ಪ್ರತ್ಯೇಕತೆಯಂತಹ ಅಭ್ಯಾಸಗಳು ಅಸಂವಿಧಾನಿಕವಾಗಿದೆ. ಜಾತಿ, ಲಿಂಗ, ಅಂಗವೈಕಲ್ಯ ಮುಂತಾದ ಯಾವುದೇ ಆಧಾರದ ಮೇಲೆ ಕಾರಾಗೃಹಗಳ ಒಳಗೆ ತಾರತಮ್ಯವನ್ನು ಮಾಡಿದರೆ ಕೋರ್ಟ್ ತಿಳಿಯಲಿದೆ. ಮೂರು ತಿಂಗಳ ಅವಧಿಯ ನಂತರ ಈ ರೀತಿ ಪ್ರಕರಣವನ್ನು ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದ್ದು, ರಾಜ್ಯಗಳು ಆದೇಶ ಪಾಲನೆ ಮಾಡುವ ಅವಶ್ಯಕತೆ ಇದೆ ಎಂದು ಆದೇಶದಲ್ಲಿ ತಿಳಿಸಿದೆ.