ಬೆಳ್ತಂಗಡಿ: ನವದುರ್ಗೆಯರ ಆರಾಧನೆ ಆರಂಭವಾಗಿದೆ. ಊರೂರಲ್ಲಿ, ದೇವಿ ನೆಲೆಯಾಗಿರುವ ದೇವಸ್ಥಾನಗಳಲ್ಲಿ ಇಂದಿನಿಂದ ನವರಾತ್ರಿ ಹಬ್ಬ, ವಿಶೇಷ ಪೂಜೆ ನಡೆಯಲಿದೆ. ಪ್ರಮುಖ ಹಬ್ಬಗಳಲ್ಲಿ ನವರಾತ್ರಿಯೂ ಒಂದಾಗಿದ್ದು, ಒಂಬತ್ತು ದಿನಗಳವರೆಗೆ ಹಬ್ಬದ ವಾತಾವರಣ ಇರುತ್ತದೆ. ಈ ಮಧ್ಯೆ ಮಾರಿಗುಡಿ ದೇವಸ್ಥಾನ ನೋಡುಗರ ಕಣ್ಸೆಳೆಯುತ್ತಿದೆ.
ಸಂತೆಕಟ್ಟೆ ಬಳಿಯ ಮಾರಿಗುಡಿ ದೇವಸ್ಥಾನ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿದೆ. ಹೊರಾಂಗಣ ಮತ್ತು ಒಳಾಂಗಣ ಕೇಸರಿ ಹಾಗೂ ಹಳದಿ ಬಣ್ಣದ ಹೂಗಳಿಂದ ಶೃಂಗಾರಗೊಂಡಿದ್ದು ಒಮ್ಮೆ ಎಲ್ಲರೂ ಅತ್ತ ಕಡೆ ಕಣ್ಣಾಯಿಸುವಂತಿದೆ.
ಗರ್ಭಗುಡಿಯೊಳಗೆ ದೇವಿಗೂ ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿದೆ. ಇಂದು ಮುಂಜಾನೆಯಿಂದಲೆ ಭಕ್ತಾಧಿಗಳು ಶ್ರೀ ದೇವಿಯ ದರ್ಶನ ಪಡೆಯಲು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.
ಸಾಮಾನ್ಯವಾಗಿ ಪ್ರತೀ ಮಂಗಳವಾರ ಮತ್ತು ಶುಕ್ರವಾರ ಮಾರಿಗುಡಿ ದೇವಸ್ಥಾನದಲ್ಲಿ ಭಕ್ತಾಧಿಗಳ ಸಂಖ್ಯೆ ಹೆಚ್ಚಿರುತ್ತದೆ. ನಾಳೆ ನವರಾತ್ರಿಯ 2ನೇ ದಿನವೂ ಹೌದು, ಶುಕ್ರವಾರವೂ ಹೌದು. ಈ ಹಿನ್ನೆಲೆ ನಾಳೆ ಮಾರಿಗುಡಿ ದೇವಸ್ಥಾನಕ್ಕೆ ಹೆಚ್ಚಾಗಿ ಮಹಿಳಾ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆಯಲಿದ್ದಾರೆ.