ಕಾರವಾರ: ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಇನ್ನೂ ಕೂಡ ಮೂವರ ಮೃತದೇಹ ಪತ್ತೆಯಾಗಿಲ್ಲ. ಈ ಹಿನ್ನಲೆ ನಾಪತ್ತೆಯಾದವರ ಪತ್ತೆ ಕಾರ್ಯ ಆರಂಭಿಸಲಾಗುತ್ತಿದ್ದು ಇದಕ್ಕಾಗಿ ಗೋವಾದಿಂದ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ತರಿಸಲಾಗಿದೆ.
ಡ್ರೆಜ್ಜಿಂಗ್ ಮಷಿನ್ ಕಾರವಾರ ಬಂದರಿಗೆ ಆಗಮಿಸಿದ್ದು ಶಿರೂರಿಗೆ ಡ್ರೆಜ್ಜಿಂಗ್ ಮಷಿನ್ ತಲುಪಿದ ಬಳಿಕ ಕಾರ್ಯಾಚರಣೆ ಪ್ರಾರಂಭವಾಗುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜುಲೈ 16ರಂದು ಅಂಕೋಲಾದ ಶಿರೂರಿನಲ್ಲಿ ಬೃಹತ್ ಗುಡ್ಡ ಕುಸಿದು 11 ಜನರು ಸಾವಿಗೀಡಾಗಿದ್ದರು. ಇದರಲ್ಲಿ 8 ಮಂದಿಯ ಮೃತದೇಹ ಮಾತ್ರ ದೊರೆತ್ತಿದ್ದು ಇನ್ನೂ ಮೂವರ ಮೃತದೇಹಕ್ಕಾಗಿ ಸಾಕಷ್ಟು ಶೋಧ ನಡೆಸಲಾಗಿತ್ತು. ಉಡುಪಿಯ ಈಶ್ವರ ಮಲ್ಪೆ ಅವರ ತಂಡ ಶೋಧ ನಡೆಸಿದಾಗ ಲಾರಿ ಹಾಗೂ ಟ್ಯಾಂಕರ್‌ನ ಅವಶೇಷಗಳು ಪತ್ತೆಯಾಗಿದ್ದವು. ಆದರೆ ಶಿರೂರಿನ ಜಗನ್ನಾಥ್ ನಾಯ್ಕ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಕೇರಳ ಮೂಲದ ಅರ್ಜುನ್ ಮೃತದೇಹ ಪತ್ತೆಯಾಗಿಲ್ಲ. ಗುಡ್ಡ ಕುಸಿತವಾಗಿದ್ದರಿಂದ ಅಪಾರ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ ಕುಸಿದಿದೆ. ನದಿಯಲ್ಲಿ ರಾಶಿಬಿದ್ದ ಮಣ್ಣಿನಡಿಯಲ್ಲಿ ಉಳಿದ ಮೃತದೇಹಗಳು, ಹಾಗು ಲಾರಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಶೋಧ ಕಾರ್ಯಕ್ಕಾಗಿ ಈ ಹಿಂದೆಯೆ ಡ್ರೆಜ್ಜಿಂಗ್ ಮಷಿನ್ ತರಿಸಿ ಕಾರ್ಯಾಚರಣೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಮಳೆ ಕಡಿಮೆಯಾದ ಬೆನ್ನಲ್ಲೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಸಹಕಾರದಿಂದ ಡ್ರೆಜ್ಜಿಂಗ್ ಮಷಿನ್ ತರಿಸಲಾಗಿದೆ. ಆದರೆ ಕಾರ್ಯಾಚರಣೆಗೆ ಒಂದಷ್ಟು ಅಡ್ಡಿ ಉಂಟಾಗಿದೆ.
ಡ್ರೆಜ್ಜಿಂಗ್ ಮಷಿನ್ ಕಾರ್ಯಾಚರಣೆಗೆ ಗಾಳಿ ಹಾಗೂ ಸಮುದ್ರದ ಉಬ್ಬರ- ಇಳಿತ ಅಡ್ಡಿಯಾಗುತ್ತಿದ್ದು, ಗಂಗಾವಳಿ ಅಳಿವೆ ಪ್ರದೇಶದಲ್ಲಿ ಡ್ರೆಜ್ಜಿಂಗ್ ಮಷಿನ್ ಪ್ರವೇಶಕ್ಕೆ ಸಮುದ್ರ ಭರತವಾಗಬೇಕಿದೆ. ಆಗ ಮಾತ್ರ ಅಳಿವೆಯಿಂದ ನದಿಗೆ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಪ್ರವೇಶ ಮಾಡಲಿದೆ. ಇದೀಗ ನೀರು ಇಳಿಕೆಯಾಗಿರುವ ಕಾರಣ ಡ್ರೆಜ್ಜಿಂಗ್ ಮಷಿನ್ ಹೂಳಿನಲ್ಲೇ ಸಿಲುಕಿಕೊಳ್ಳುವ ಭೀತಿ ಇದೆ. ಅಲ್ಲದೆ ಗಂಗಾವಳಿ ನದಿಯ ಸೇತುವೆಯಡಿ ಬಾರ್ಜ್ ಸಹಿತ ಡ್ರೆಜ್ಜಿಂಗ್ ಮಷಿನ್ ಫುಲ್ ಸೆಟಪ್ ಜೊತೆ ದಾಟಲು ಕೂಡ ಕಷ್ಟವಾಗಲಿದೆ. ಇದೇ ಕಾರಣಕ್ಕೆ ಬಾರ್ಜ್ ಮೇಲೆ ಡ್ರೆಜ್ಜಿಂಗ್ ಮಷಿನರಿಗಳನ್ನು ಬಿಡಿಸಿ ಆ ಬಳಿಕ ದಾಟಿಸುವ ಕೆಲಸ ಮಾಡಲಾಗುತ್ತದೆ ಎಂದು ಡ್ರೆಜ್ಜಿಂಗ್ ಮಷಿನ್ ಸಿಬ್ಬಂದಿ ಮಾಹಿತಿ ನೀಡಿದರು.
ಡ್ರೆಜ್ಜಿಂಗ್ ಮಾಡಲು ಒಟ್ಟು 90 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.