ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದ ಘಟನೆ ಸೆ.08ರಂದು ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ಸಂಭವಿಸಿದೆ.
ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದ ರಾಜರತ್ನಪುರದ ನಿವಾಸಿ ಚೇತನಾ (35) ರಸ್ತೆ ದಾಟುತ್ತಿದ್ದ ವೇಳೆ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ವೇಗವಾಗಿ ಬರುತ್ತಿದ್ದ ರಿಕ್ಷಾ ಡಿಕ್ಕಿಯಾಗಿದ್ದು, ಮಹಿಳೆಯನ್ನು ತಪ್ಪಿಸುವ ಭರದಲ್ಲಿ ಚಾಲಕ, ರಿಕ್ಷಾವನ್ನು ರಸ್ತೆ ಬದಿಗೆ ತಿರುಗಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಆಟೋ ಮಹಿಳೆಯ ಮೇಲೆ ಉರುಳಿ ಬಿದ್ದಿದೆ. ರಿಕ್ಷಾ ಡಿಕ್ಕಿ ಹೊಡೆದು ಅದರಡಿ ಸಿಕ್ಕಿಹಾಕಿಕೊಂಡ ತನ್ನ ತಾಯಿಯನ್ನು ನೋಡಿದ ಪುತ್ರಿ 7ನೇ ತರಗತಿಯ ವೈಭವಿ ತಕ್ಷಣ ತನ್ನ ತಾಯಿಯ ಬಳಿ ಧಾವಿಸಿ ಬಂದು ಆಟೋವನ್ನು ಮೇಲೆತ್ತಲು ಪ್ರಯತ್ನಿಸಿದ್ದಾಳೆ. ಬಳಿಕ ಸ್ಥಳೀಯರೆಲ್ಲ ಸೇರಿ ಉರುಳಿ ಬಿದ್ದಿದ್ದ ಆಟೋವನ್ನು ಮೇಲಕ್ಕೆತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಸದ್ಯ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟ ಬಾಲಕಿಯ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.