ಬೆಳ್ತಂಗಡಿ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ : ಶಿಕ್ಷಕರು  ಉಜ್ವಲ ಭವಿಷ್ಯ ರೂಪಿಸುವ ರೂವಾರಿಗಳು,ಶಾಸಕ ಹರೀಶ್ ಪೂಂಜ:

 

 

ಬೆಳ್ತಂಗಡಿ: ಶಿಕ್ಷಕರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವ ರೂವಾರಿಗಳಾಗಿದ್ದು ಅವರ ಆಸಕ್ತಿ, ಅಭಿರುಚಿಯನ್ನು ಗುರುತಿಸಿ, ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಗುರುವಾರ ಬೆಳ್ತಂಗಡಿಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೋಲೇ ಗೆಲುವಿನ ಸೋಪಾನವಾಗಿದೆ. ಗೆಲುವು ಮುಂದಿನ ಜೀವನಕ್ಕೆ ಸ್ಪೂರ್ತಿ, ಪ್ರೇರಣೆ ನೀಡುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಸ್ವೀಕರಿಸುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಕಾಲಿಕ ಪ್ರೇರಣೆ, ಮಾರ್ಗದರ್ಶನ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸಮಾಜದಲ್ಲಿ ಗುರುಗಳಿಗೆ ದೇವರ ಸ್ಥಾನ-ಮಾನ ನೀಡಿ ಎಲ್ಲರೂ ಗೌರವಿಸುತ್ತಾರೆ. ಡಾ. ಎಸ್. ರಾಧಾಕೃಷ್ಣನ್, ಚಾಣಕ್ಯರಂತಹ ಆದರ್ಶ ಗುರುಗಳ ಸೇವೆಯನ್ನು ಅವರು ಸ್ಮರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಇರುವುದು ಖೇದಕರವಾಗಿದೆ. ಇದಕ್ಕೆ ವಿಷಪೂರಿತ ಆಹಾರ ಸೇವನೆಯೇ ಕಾರಣವಾಗಿದೆ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸಿ ಬೆಳೆಸಿದ ವಿಷಪೂರಿತ ಆಹಾರ ಸೇವನೆಯೇ ಹೆಚ್ಚಿನ ರೋಗಗಳಿಗೆ ಕಾರಣವಾಗಿದೆ. ಆದುದರಿಂದ ಸಾಧ್ಯವಾದಷ್ಟು ಅವರವರ ಹೊಲದಲ್ಲಿ, ತೋಟದಲ್ಲಿ ತರಕಾರಿ, ಹಣ್ಣು-ಹಂಪಲು, ಧಾನ್ಯಗಳನ್ನು ಬೆಳೆಸಿ ಬಳಸಲು ಶಿಕ್ಷಕರು, ಸಮಾಜದ ಸಾರ್ವಜನಿಕರಿಗೆ ಮಾರ್ಗದರ್ಶನ, ಪ್ರೇರಣೆ ನೀಡಬೇಕೆಂದು ಅವರು ಸಲಹೆ ನೀಡಿದರು.
ಶಿಕ್ಷಕರ ದಿನಾಚರಣೆಯಂದು ಎಲ್ಲರೂ ಒಂದೇ ಕುಟುಂಬದವರಂತೆ ಪ್ರೀತಿ-ವಿಶ್ವಾಸದಿಂದ ಭಾಗವಹಿಸಬೇಕೆಂಬ ಉದ್ದೇಶದಿಂದ ಮುಂದಿನ ವರ್ಷದಿಂದ ಸೆ.05ನ್ನು ಸಾರ್ವಜನಿಕ ರಜಾದಿನವಾಗಿ ಘೋಷಿಸಬೇಕೆಂದು ತಾನು ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಭರವಸೆ ನೀಡಿದರು.
24 ಮಂದಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ನಿವೃತ್ತ ಶಿಕ್ಷಕರ ಪೈಕಿ ರಾಮಕೃಷ್ಣ ಭಟ್ ಮತ್ತು ಮೇರಿ ಅನಿಸಿಕೆ ವ್ಯಕ್ತಪಡಿಸಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಹಲವು ಸಿಬ್ಬಂದಿಗಳ ಹುದ್ದೆ ಖಾಲಿ ಇದ್ದರೂ ಬೆಳ್ತಂಗಡಿ ತಾಲೂಕು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಜ್ಞಾನೇಶ್ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಸ್ವಾಗತಿಸಿದರು. ಚೇತನಾಕ್ಷಿ ಧನ್ಯವಾದವಿತ್ತರು.
ಶಿಕ್ಷಕರಾದ ಧನಂಜಯ ಮತ್ತು ಸೌಮ್ಯ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!