ಬೆಳ್ತಂಗಡಿ:ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಸೆ05 ರಂದು ಶಿಕ್ಷಕರ ದಿನಾಚರಣೆಯು ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘ (ನಿ), ಉಜಿರೆ ಇದರ ಸಂಯುಕ್ತಾಶ್ರಯದಲ್ಲಿ ನಡೆಯಿತು. ಶಾಲಾ ಸಂಚಾಲಕ ಫಾ.ವಿನೋದ್ ಮಸ್ಕರೇನಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಗೌರವ ಅತಿಥಿಗಳಾದ ವಂ.ಫಾ.ರೋಶನ್ ಕ್ರಾಸ್ತಾ, ಆಡಳಿತಾಧಿಕಾರಿಗಳು, ಎಲ್.ಎಮ್.ಪಿಂಟೋ ಆಸ್ಪತ್ರೆ, ಬದ್ಯಾರ್ ಹಾಗೂ . ವಲೇರಿಯನ್ ರೋಡ್ರಿಗಸ್, ಅಧ್ಯಕ್ಷರು ಮತ್ತು ಶ್ರೀಯುತ. ಅನಿಲ್ ಪ್ರಕಾಶ್ ಡಿಸೋಜಾ, ಉಪಾಧ್ಯಕ್ಷರು, ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘ (ನಿ), ಉಜಿರೆ, ಶ್ರೀಮತಿ ಶಾಲಿ, ಅಧ್ಯಕ್ಷರು ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್ ಹಾಗೂ ಶ್ರೀಮತಿ. ದಿವ್ಯಾ ಟಿ.ವಿ, ಶಾಲಾ ಮುಖ್ಯ ಶಿಕ್ಷಕರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಮತ್ತು ಭಾರತದ ಸಂವಿಧಾನ ಗ್ರಂಥಕ್ಕೆ ಪುಷ್ಪದ ಹಾರವನ್ನು ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ವಂ.ಫಾ.ರೋಶನ್ ಕ್ರಾಸ್ತಾ ರವರು ಮಾತನಾಡಿ, ಈ ಶಾಲೆಯು ಹೆಸರಿಗೆ ತಕ್ಕಂತೆ ದಯೆ ಮತ್ತು ಪ್ರೀತಿಯ ತಾಣವಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರ ಸೇವೆಯಲ್ಲಿ ದಯೆ ಮತ್ತು ಪ್ರೀತಿಯು ಎದ್ದು ಕಾಣುತ್ತಿದೆ. ಶಾಲೆಯ ಈ ಸೇವೆಯಲ್ಲಿ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್.ಎಮ್.ಪಿಂಟೋ ಆಸ್ಪತ್ರೆಯ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುವ ಭರವಸೆಯನ್ನು ನೀಡುತ್ತಾ ಎಲ್ಲಾ ಶಿಕ್ಷಕರಿಗೂ, ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ವಲೇರಿಯನ್ ರೋಡ್ರಿಗಸ್ ಮಾತನಾಡಿ, ಒಬ್ಬ ಮನುಷ್ಯನ ಜೀವನದಲ್ಲಿ ಪ್ರಪಂಚವನ್ನು ತೋರಿಸುವವಳು ತಾಯಿಯಾದರೆ, ಈ ಪ್ರಪಂಚ ಹೇಗಿದೆ ಎಂಬುದನ್ನು ತೋರಿಸುವವರು ಶಿಕ್ಷಕರು. ಈ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರ ಸೇವೆ ಪ್ರಶಂಸನೀಯ ಮತ್ತು ಇಲ್ಲಿನ ಮಕ್ಕಳ ಸೇವೆಗಾಗಿ ಇಂತಹ ಶಿಕ್ಷಕರನ್ನು ಪಡೆದುಕೊಂಡಿರುವುದು ಸಂಸ್ಥೆಯ ಪುಣ್ಯವೇ ಸರಿ ಎಂದು ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು. ವಂ.ಫಾ.ವಿನೋದ್ ಮಸ್ಕರೇನಸ್ ರವರು ಮಾತನಾಡಿ ತಾಯಿ-ತಂದೆ ನಮ್ಮ ಮೊದಲ ಗುರು. ತದನಂತರ ನಾವು ಬೆಳೆದಂತೆ, ನಮ್ಮ ದೇಶ, ರಾಜ್ಯ, ಊರು, ಶಾಲೆ ಮುಂತಾದವುಗಳ ಮೇಲೆ ಬೆಳಕನ್ನು ಚೆಲ್ಲಿ ನಮ್ಮ ಜ್ಞಾನದ ಭಂಡಾರವನ್ನು ವಿಸ್ತರಿಸುವವರು ನಮ್ಮ ಶಿಕ್ಷಕರು. ಇಂತಹ ಶಿಕ್ಷಕರನ್ನು ಸ್ಮರಿಸಲು ನಮಗೆ ಪ್ರೇರಣೆ ನೀಡಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರನ್ನು ತುಂಬು ಕೃತಜ್ಞತೆಯಿಂದ ಸ್ಮರಿಸಿದರು. ಶಾಲೆಯ ಎಲ್ಲಾ ಮಕ್ಕಳ ಪ್ರತಿಯೊಂದು ಬೆಳವಣಿಗೆಯಲ್ಲಿ ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿವಿಧ ಥೆರಪಿಸ್ಟ್‌ಗಳ ಸೇವೆ ಶ್ಲಾಘನೀಯ. ಇಂತಹ ಅತ್ಯುತ್ತಮ ಸಿಬ್ಬಂದಿಗಳಿಂದಲೇ ನಮ್ಮ ಮಕ್ಕಳು ಕಲಿಕೆಯಲ್ಲಿ ಮತ್ತು ಇನ್ನಿತರ ಕೌಶಲ್ಯಗಳಲ್ಲಿ ಮುಂದೆ ಬರಲು ಸಾಧ್ಯವಾಗಿದೆ ಎನ್ನುತ್ತಾ ಎಲ್ಲಾ ಶಿಕ್ಷಕರಿಗೂ ಶುಭಾಶಯಗಳನ್ನು ತಿಳಿಸಿದರು. ಶ್ರೀಮತಿ ಶಾಲಿಯವರು ಎಲ್ಲಾ ಶಿಕ್ಷಕರನ್ನು ಅಭಿನಂದಿಸುತ್ತಾ, ಅವರ ಸೇವೆಗೆ ದೇವರ ಆಶೀರ್ವಾದವು ಸದಾ ಇರಲಿ ಎಂದು ಆಶಿಸಿದರು.
ಕಾರ್ಯಕ್ರಮದ ಪ್ರಾಯೋಜಕರಾದ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘ (ನಿ), ಉಜಿರೆ ಇಲ್ಲಿನ ಸಿ.ಇ.ಒ ವಿಲ್ಸನ್ ನೆಲ್ಸನ್ ಮೋನಿಸ್ ರವರು, ಸಂಘದ ನಿರ್ದೇಕರು, ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು, ದಯಾ ವಿಶೇಷ ಶಾಲೆಯ ಮತ್ತು ಸಿ.ಕೆ.ಎಸ್.ಕೆ ಯ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಹಲವು ಆಟೋಟಗಳನ್ನು ಆಯೋಜಿಸಿ ಶಿಕ್ಷಕರಿಗೆ ಬಹುಮಾನಗಳನ್ನು ವಿತರಿಸಿ, ಎಲ್ಲಾ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ, ಈ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು. ಮಕ್ಕಳ ಮತ್ತು ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆಯು ಮುಕ್ತಾಯಗೊಂಡಿತು. ಶಿಕ್ಷಕಿ ಅರ್ಚನಾ ಸ್ವಾಗತಿಸಿ, ಶಿಕ್ಷಕಿ ಸುಜಾತಾ ವಂದಿಸಿದರು. ಶಿಕ್ಷಕಿ ಜೆನ್ವಿರಾ ವಾಸ್ ಕಾರ್ಯಕ್ರಮ ನಿರೂಪಿಸಿದರು.