ಅಗೆದಷ್ಟು ನಾಗರ ಕಲ್ಲುಗಳು ಪತ್ತೆ..!: ರಾಶಿ ಬಿದ್ದ ವಿವಿಧ ಆಕೃತಿಯ ನೂರಕ್ಕೂ ಹೆಚ್ಚು ನಾಗರಕಲ್ಲುಗಳು: ಆಶ್ಚರ್ಯಚಕಿತರಾದ ಗ್ರಾಮಸ್ಥರು

ಚಿಕ್ಕಬಳ್ಳಾಪುರ: ಮಣ್ಣು ಅಗೆದಷ್ಟು ನಾಗರ ಕಲ್ಲುಗಳು ಪತ್ತೆಯಾದ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ.

ಪುರಾತನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯಗಳ ಸಮೀಪದಲ್ಲಿರುವ ಆಲಂಬಗಿರಿ ಕೆರೆ ಅಚ್ಚುಕಟ್ಟು ಪ್ರದೇಶದ ರಸ್ತೆ ಹೊಂದಿಕೊಂಡಿರುವ ಜಾಗದಲ್ಲಿ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿವೆ.

ಇತ್ತೀಚೆಗೆ ಆಲಂಬಗಿರಿ ಗ್ರಾಮದ ದಿ.ಹೆಗ್ಗಡಿ ಮುನಿಯಪ್ಪ ಕುಟುಂಬದವರು ಸಮಸ್ಯೆಯೊಂದರ ಬಗ್ಗೆ ಶಾಸ್ತ್ರ ಹೇಳುವವರ ಮೊರೆ ಹೋದಾಗ ಪುರಾತನ ಕಾಲದಿಂದ ನಿಮ್ಮ ಕುಟುಂಬದವರು ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಿದ್ದು, ಇದೀಗ ಆ ಕಲ್ಲುಗಳಿಗೆ ಪೂಜೆ ನಿಲ್ಲಿಸಿದ್ದು, ಕೂಡಲೇ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುವಂತೆ ಸೂಚಿಸಿದ್ದರು.

ಕುಟುಂಬದ ಸದಸ್ಯರು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲು ಬಂದಾಗ ನಾಗರ ಕಲ್ಲುಗಳು ರಸ್ತೆಯ ಪಕ್ಕದಲ್ಲಿ ಮುಚ್ಚಿ ಹೋಗಿದ್ದವು. ಹೀಗಾಗಿ ಅವುಗಳನ್ನು ಮೇಲಕ್ಕೆ ಎತ್ತುವ ಕೆಲಸಕ್ಕೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಸುತ್ತಲೂ ಗುಂಡಿ ತೆಗೆದಾಗ ಹಲವು ನಾಗರ ಕಲ್ಲುಗಳು ಸಿಕ್ಕಿವೆ. ಕೂಡಲೇ ಮತ್ತಷ್ಟು ಗುಂಡಿ ತೆಗೆದಾಗ ಮತ್ತಷ್ಟು ನಾಗರಕಲ್ಲುಗಳು ಸಿಕ್ಕಿದೆ. ರಾತ್ರಿಯಾದ್ದರಿಂದ ವಾಪಸ್ ಬಂದವರು ಬೆಳಗ್ಗೆ ಮತ್ತೆ ಗುಂಡಿಯನ್ನು ತೆಗೆದಷ್ಟು ವಿವಿಧ ಆಕೃತಿಯ ನೂರಕ್ಕೂ ಹೆಚ್ಚು ನಾಗರಕಲ್ಲುಗಳು ದೊರೆತಿವೆ.
ರಾಶಿ ಬಿದ್ದ ನಾಗರಕಲ್ಲುಗಳನ್ನು ನೋಡಿದ ಸುತ್ತಮುತ್ತಲಿನ ನೂರಾರು ಮಂದಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಹೆಗ್ಗಡಿ ಮುನಿಯಪ್ಪರವರ ಜೀವಿತಾವಧಿಯಲ್ಲಿ ನಾಗರಕಲ್ಲು ಪತ್ತೆಯಾಗಿರುವ ಪ್ರದೇಶದಲ್ಲಿ ಪ್ರತಿಷ್ಟಾಪಿಸಿದ್ದ ನಾಗರ ಕಲ್ಲುಗಳಿಗೆ ನಾಗರಪಂಚಮಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರತಿವರ್ಷ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಆದರೆ ಹೆಗ್ಗಡಿ ಮುನಿಯಪ್ಪನವರು ನಿಧನರಾದ ನಂತರ ಸದರಿ ನಾಗರಕಲ್ಲುಗಳಿಗೆ ದಿನಗಳು ಕಳೆದಂತೆ ಪೂಜೆ ಸಲ್ಲಿವುದನ್ನು ನಿಲ್ಲಿಸಿದ್ದರು.

error: Content is protected !!