ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆಯೇ ಅಧಿಕೃತವಾಗಿದ್ದರೂ ಅನೇಕ ಮಳಿಗೆ, ಸರಕಾರಿ, ಖಾಸಗಿ ಸಂಸ್ಥೆಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲಿದ್ದು ಆದರೆ ಇನ್ನುಮುಂದೆ ಸರ್ಕಾರದ ಎಲ್ಲ ಇಲಾಖೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸಬೇಕು ಎಂಬ ಆದೇಶವಾಗಿದೆ.
ಕನ್ನಡ ನಾಮಫಲಕ ಕಡ್ಡಾಯಗೊಳಿಸುವುದಾಗಿ ಈ ಮೊದಲು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆ ಬಳಿಕ ಫೆಬ್ರವರಿಯಲ್ಲಿ ನಡೆದ ಅಧಿವೇಶನದ ವೇಳೆ ಉಭಯ ಸದನಗಳಲ್ಲಿ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024 ಅನ್ನು ಮಂಡಿಸಿ, ಅಂಗೀಕಾರ ಪಡೆದಿತ್ತು. ಹೀಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ‘ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸುವಂತೆ’ ಸುತ್ತೋಲೆ ಹೊರಡಿಸಿದ್ದಾರೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ-2024 ಪ್ರಕಾರ ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಬ್ಯಾಂಕುಗಳು, ಇತರ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು ಮತ್ತು ವಿಶ್ವವಿದ್ಯಾಲಯಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು. ಹೆಸರು, ಪದನಾಮ, ಸೇವಾ ಅವಧಿಯ ನಾಮಫಲಕಗಳು, ಮಾರ್ಗಗಳ ಸೂಚನಾ ಫಲಕಗಳು, ಇನ್ನಿತರೆ ಯಾವುದೇ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸುವಂತೆ ಸೂಚಿಸಿದೆ.
ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಕಡ್ಡಾಯವಾಗಿ ಕನ್ನಡ ಭಾಷೆಯು ಶೇಕಡ 60 ರಷ್ಟು ನಾಮಫಲಕದ ಮೇಲ್ಭಾಗದಲ್ಲಿರುವಂತೆ ಹಾಗೂ ಶೇ.40 ರಷ್ಟು ಆಂಗ್ಲಭಾಷೆಯಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.