ತರಗತಿ ಕೊಠಡಿಗಳ ಅಭಾವ: ಸ್ಮಶಾನವೇ ಪಾಠ ಶಾಲೆ: ಸ್ಮಶಾನದ ಗೋರಿಗಳೇ ಈ ಮಕ್ಕಳಿಗೆ ಬೆಂಚ್..!

ಬಿಹಾರ: ಶಾಲಾ ಮಕ್ಕಳ ನೀರಿನ ಅಭಾವ ತಡೆಯಲು ಬಾವಿ ತೆರೆದವರನ್ನು, ತನ್ನೂರಿಗೊಂದು ಶಾಲೆ ಬೇಕೆಂಬ ಹಂಬಲದಲ್ಲಿ ಹೋರಾಡುವವರನ್ನು, ತಮ್ಮ ಭೂಮಿಯನ್ನೇ ಶಾಲಾ ನಿರ್ಮಾಣಕ್ಕೆ ದಾನ ನೀಡುವವರನ್ನು ಇದಿಷ್ಟೇ ಅಲ್ಲದೆ ಕಿತ್ತಾಳೆ ಮಾರಿ ಶಾಲೆ ನಿರ್ಮಿಸಿದವರನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಈ ಊರಿನಲ್ಲಿ ಮಾತ್ರ 295 ಓದುವ ಮಕ್ಕಳಿದ್ದರೂ ಶಾಲಾ ಕಟ್ಟಡ ಇಲ್ಲ. ಸ್ಮಶಾನವೇ ಮಕ್ಕಳಿಗೆ ಪಾಠ ಶಾಲೆಯಾಗಿದೆ.

ಬಿಹಾರದ ಮಧುಬನಿಯ ಅಂಧರತಧಿ ಬ್ಲಾಕ್‌ನ ಹರ್ನಾ ಪಂಚಾಯತ್‌ನ ಉರ್ದು ಮಾಧ್ಯಮಿಕ ಶಾಲೆಯ ಮಕ್ಕಳ ದಯನೀಯ ಸ್ಥಿತಿ ಇದು. ಶಾಲಾ ಕಟ್ಟಡಕ್ಕಾಗಿ 7 ಲಕ್ಷ ರೂ ಅನುದಾನ ಇದ್ದರೂ ಭೂಮಿಯ ಕೊರತೆಯಿಂದ ಶಾಲೆ ಕಟ್ಟಡ ನಿರ್ಮಿಸಲಾಗಿಲ್ಲ. ಹೀಗಾಗಿ ಮಕ್ಕಳು ಸ್ಮಶಾನದ ಗೋರಿಗಳ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಸಮಾಧಿಗಳ ಪಕ್ಕದಲ್ಲಿ ಅಥವಾ ಮಸೀದಿಯ ಗೇಟ್ ಸಮೀಪ ಕುಳಿತು ಊಟ ಮಾಡುತ್ತಿದ್ದಾರೆ.

ಮಧುಬನಿ ಶಾಲೆಯನ್ನು 2006ರಲ್ಲಿ ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಮೇಲ್ದರ್ಜೆಗೇರಿಸಲಾಗಿದೆ. ಆದರೂ, ಶಾಲೆಯ ಮೂಲ ಸೌಕರ್ಯದ ಕೊರತೆ ಸಮಸ್ಯೆ ನೀಗಿಲ್ಲ. ಶಾಲೆಯನ್ನು ಉನ್ನತೀಕರಿಸಿದ ಬಳಿಕವೂ ಕಳೆದೆರಡು ವರ್ಷದಿಂದ ಇಲ್ಲಿರುವುದು ಕೇವಲ ಎರಡೇ ಎರಡು ತರಗತಿ. ಒಂದನ್ನು ಅಡುಗೆ ಮತ್ತು ಧಾನ್ಯಗಳ ಸಂಗ್ರಹಣ ಕೋಣೆಯಾಗಿ ಮಾಡಲಾಗಿದೆ. ಉಳಿದ ಒಂದು ಕೊಠಡಿಯನ್ನು ತರಗತಿಗಾಗಿ ಮತ್ತು ಸಿಬ್ಬಂದಿ ಬಳಸುತ್ತಿದ್ದಾರೆ.

ಮೂಲ ಸೌಕರ್ಯ ಕೊರತೆಯಿಂದ ಮಕ್ಕಳು ತರಗತಿಗೆ ಬದಲಾಗಿ ರಸ್ತೆ, ಸ್ಮಶಾನ, ಬೇವಿನ ಮರದ ಕೆಳಗೆ ಕುಳಿತು ಪಾಠ ಕೇಳುತ್ತಿದ್ದಾರೆ.

error: Content is protected !!