ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.): 8ನೇ ವರ್ಷದ ಸಂಭ್ರಮಾಚರಣೆ: ‘ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ’ ಪ್ರದಾನ: ಸೇವಾ ಮಾಣಿಕ್ಯರಿಗೆ ಗೌರವ ಸಮರ್ಪಣೆ : ಆರ್ಥಿಕ ನೆರವು ಹಸ್ತಾಂತರ

ಬಂಟ್ವಾಳ: ಜನ ಸೇವೆಯೇ ಜನಾರ್ದನ ಸೇವೆ ಎಂಬ ಧ್ಯೇಯೋದ್ದೇಶದೊಂದಿಗೆ ಅಶಕ್ತರ ಬಾಳಿಗೆ ನೆರವಾಗುತ್ತಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ದ.ಕ, ಕರ್ನಾಟಕ, 8 ವರ್ಷಗಳನ್ನು ಪೂರೈಸಿ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಹಿನ್ನೆಲೆ ಆ.18ರಂದು ಬಜಿರೆಯ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ, 8ನೇ ವರ್ಷದ ಸಂಭ್ರಮಾಚರಣೆ, ‘ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ’ ಪ್ರದಾನ, ಸೇವಾ ಸಂಸ್ಥೆಗಳಿಗೆ ಹಾಗೂ ಸೇವಾ ಮಾಣಿಕ್ಯರಿಗೆ ಗೌರವ ಸಮರ್ಪಣೆ, ಆರ್ಥಿಕ ನೆರವು ಹಸ್ತಾಂತರ ಕಾರ್ಯಕ್ರಮ ನಡೆದಿದೆ.

ಕಾರ್ಯಕ್ರಮಕ್ಕೆ ಮಂಗಳೂರಿನ ‘ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.)’ ಇದರ ಸ್ಥಾಪಕಾಧ್ಯಕ್ಷರಾದ ಅರ್ಜುನ್ ಬಂಡರ್ ಕರ್, ಶ್ರೀ ಗುರು ಚೈತನ್ಯ ಸೇವಾಶ್ರಮ ಬಜಿರೆ ಇದರ ಸ್ಥಾಪಕಾಧ್ಯಕ್ಷರಾದ ಹೊನ್ನಯ್ಯ ಕುಲಾಲ್, ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಚಂದ್ರ ಜೈನ್ ಜಂತೋಡಿ ಗುತ್ತು ಮನೆತನ, ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ ಪುಲಿಮೇರು, ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ಇದರ ಆಡಳಿತ ಸಮಿತಿ ಪದಾಧಿಕಾರಿ ಶ್ಯಾಮಲ ಜಿ ಕುಲಾಯಿ ಇವರುಗಳು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

‘ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸ್ಥಾಪಕಾಧ್ಯಕ್ಷರಾದ ಅರ್ಜುನ್ ಬಂಡರ್ ಕರ್ ಅವರು ಮಾತನಾಡಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ತಂಡದ ಸೇವಾಕಾರ್ಯಗಳನ್ನು ಶ್ಲಾಘಿಸಿದರು,

ಶ್ರೀ ಗುರು ಚೈತನ್ಯ ಸೇವಾಶ್ರಮ ಬಜಿರೆ ಇದರ ಸ್ಥಾಪಕಾಧ್ಯಕ್ಷರಾದ ಹೊನ್ನಯ್ಯ ಕುಲಾಲ್ ಮಾತನಾಡಿ ಕಾರ್ಯಕ್ರಮವನ್ನು ಆಶ್ರಮದಲ್ಲಿ ಹಮ್ಮಿಕೊಂಡ ಕಾರಣಕ್ಕೆ ಸಂತಸ ವ್ಯಕ್ತಪಡಿಸಿದರು.

‘ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ’ ಪ್ರದಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯುತ್ತಮ ಸಮಾಜ ಸೇವಕಿ ಹಾಗೂ ಮೂಕ ಪ್ರಾಣಿಗಳ ರಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಉಷಾ ಸುವರ್ಣ ಇವರಿಗೆ 2024-25ನೇ ಸಾಲಿನ ‘ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ

ಅಶಕ್ತ ಕುಟುಂಬಗಳಿಗೆ ನೆರವಾಗುವ ಮೂಲಕ ಸೇವಾಕಾರ್ಯದಲ್ಲಿ ತೊಡಗಿಕೊಂಡಿರುವ ‘ಇಂಚರ ಸೇವಾ ಬಳಗ (ರಿ.) ನಂದಳಿಕೆ’ ‘ಬದುಕಿಗೊಂದು ನೆರಳು ಸೇವಾ ಟ್ರಸ್ಟ್ ದ.ಕ’ ‘ಸ್ಪಂದನ ಫ್ರೆಂಡ್ಸ್ ದೇವಸ್ಯ, ಪಡೂರು’ ಹಾಗೂ ‘ಸೂಕ್ತ ನ್ಯೂಸ್ ಸಿದ್ದಕಟ್ಟೆ ಬಂಟ್ವಾಳ’ ಇವುಗಳಿಗೆ ಗೌರವ ಸಲ್ಲಿಸಲಾಯಿತು. ಹಾಗು ಶ್ರೀ ಗುರು ಚೈತನ್ಯ ಸೇವಾಶ್ರಮ ಬಜಿರೆ ಇದರ ಸ್ಥಾಪಕಾಧ್ಯಕ್ಷರಾದ ಹೊನ್ನಯ್ಯ ಕುಲಾಲ್ ಇವರನ್ನು ಸನ್ಮಾನಿಸಿ, ಆಶ್ರಮಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು.

ಆರ್ಥಿಕ ನೆರವು 

‘ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು’ ತಂಡವು ಸಮಾಜ ಸೇವೆಯಲ್ಲಿ 5 ವರ್ಷ ಪೂರೈಸಿದ ಸುಸಂದರ್ಭದಲ್ಲಿ 200 ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ವಿತರಣಾ ಕಾರ್ಯಕ್ರಮವು ಸೆ. 29ರಂದು ಹಮ್ಮಿಕೊಂಡಿದೆ. ಈ ಯೋಜನೆಗೆ ಕೈ ಜೋಡಿಸಿದ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ), ದಕ್ಷಿಣ ಕನ್ನಡ, ಕರ್ನಾಟಕ ಈ ಸೇವಾ ತಂಡಕ್ಕೆ 33ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡಿದೆ.

ಕಾರ್ಯಕ್ರದಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ), ದಕ್ಷಿಣ ಕನ್ನಡ, ಕರ್ನಾಟಕದ ಎಲ್ಲಾ ಸೇವಾ ಮಾಣಿಕ್ಯರನ್ನು ಗುರುತಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕುಂಜೋಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಆಚಾರ್ಯ, ಆರಂಬೋಡಿ ಪಂಚಾಯತ್ ಸದಸ್ಯರಾದ ತೇಜಸ್ವಿ ಪ್ರವೀಣ್ ಆಚಾರ್ಯ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

ದೀಪಾ. ಕೆ ಪಡಿಯಾರ್ ಪ್ರಾರ್ಥಿಸಿ, ಲತಾ.ಡಿ ಅನಂತಾಡಿ ಸ್ವಾಗತಿಸಿದರು. ಕುಶಾನಂದ ಮೂರ್ಜೆ  ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿವ್ಯ ನಾಳ ಸನ್ಮಾನ ಪತ್ರ ವಾಚಿಸಿ, ಸುಮಲತ ದನ್ಯವಾದವಿತ್ತರು. ಪತ್ರಕರ್ತೆ ಯೋಗಿನಿ ಮಚ್ಚಿನ ಕಾರ್ಯಕ್ರಮ ನಿರೂಪಿಸಿದರು.

ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ತಂಡ ನಡೆದು ಬಂದ ಹಾದಿ..

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದೊಂದಿಗೆ 2016 ಆ. 14ರಂದು ಯುವ – ಮನಸ್ಸುಗಳ ಸಾಮಾಜಿಕ ಜಾಲತಾಣಗಳ ಮಾತಿನ ವಿಚಾರ ವಿನಿಮಯದಿಂದ “ತುಳುನಾಡ ಪೊರ್ಲು ಸೇವಾ ಟ್ರಸ್ಟ್ ” ಎಂಬ ನಾಮಾಂಕಿತದೊಂದಿಗೆ ಸಂಸ್ಥೆ ಉದಯವಾಯಿತು. ಪ್ರಾರಂಭದ ತಿಂಗಳಲ್ಲಿ ಒಂದು ಅಶಕ್ತ ಕುಟುಂಬದ ಕಷ್ಟಕ್ಕೆ ನೆರವನ್ನು ನೀಡುವ ಮೂಲಕ ಅದರಲ್ಲಿ ಸಂತೃಪ್ತಿ ಭಾವನೆಯನ್ನು ಕಂಡ ತಂಡ ಮತ್ತಷ್ಟು ನೊಂದ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಇಟ್ಟ ಹೆಜ್ಜೆ ಈಗ 8 ವರ್ಷಗಳನ್ನು ಪೂರೈಸಿದೆ.

96 ತಿಂಗಳ ಸೇವಾ ಪಯಣದಲ್ಲಿ 550ಕ್ಕೂ ಅಧಿಕ ಕುಟುಂಬಕ್ಕೆ 80 ಲಕ್ಷ ನೆರವನ್ನು ನೀಡಿರುವ ಸಂತೃಪ್ತಿ “ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ)”ನ ಸೇವಾ ಮಾಣಿಕ್ಯರಿಗೆ. ಮಾನವೀಯ ಕಳಕಳಿಯೊಂದಿಗೆ ತುರ್ತು ಸಂದರ್ಭಗಳಲ್ಲಿ ರಕ್ತದ ಬೇಡಿಕೆಗೆ ಸ್ಪಂದನೆ, ಧಾರ್ಮಿಕ ಕ್ಷೇತ್ರದ ಉತ್ಸಾಹದಲ್ಲಿ ಭವತಿ ಭಿಕ್ಷಾಂದೇಹಿ ಸೇವಾ ಕಾರ್ಯದ ಮೂಲಕ ವಿಶೇಷ ವೇಷದೊಂದಿಗೆ ನಿಧಿ ಸಂಗ್ರಹ ಅಭಿಯಾನ, ಸ್ವಚ್ಛ – ಭಾರತ ಆಂದೋಲನದಲ್ಲಿ ಸ್ವಚ್ಛತೆ ಕಾರ್ಯ, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಶೈಕ್ಷಣಿಕ ಸೇವಾ- ಯೋಜನೆಗಳು, ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಅಂಗಾಂಗ ದಾನ ಕಾರ್ಯಕ್ಕೆ ಟ್ರಸ್ಟ್ ಹಿತೈಸಿಗಳಿಂದ ಮತ್ತು ಸೇವಾ ಮಾಣಿಕ್ಯರಿಂದ ನೋಂದಣಿ, ಆಸರೆಗೊಂದು ಸೋರು ಯೋಜನೆಯಲ್ಲಿ “ತುಳುನಾಡ ಪೊರ್ಲು ” ನಾಮಾಂಕಿತ ವಸತಿ ನಿರ್ಮಾಣ ಹೀಗೆ ಹಲವು ಯೋಜನೆಗಳೊಂದಿಗೆ ಕಳೆದ 8 ವರ್ಷದ ಪಯಣದಲ್ಲಿ ಸಂಸ್ಥೆಯ ಸೇವಾ ಮಾಣಿಕ್ಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಪ್ರತೀ ವರ್ಷದ ಸಂಭ್ರಮವನ್ನು ಕಟೀಲು ಕ್ಷೇತ್ರದ ದರ್ಶನ ಮಾಡಿ ಸೇವಾ ಕೇಂದ್ರಕ್ಕೆ ಅನ್ನದಾನ ನೀಡುವುದರೊಂದಿಗೆ ಸೇವಾ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವವರ ಜೊತೆ ಸಮಯ ಕಳೆಯುವುದರ ಜೊತೆಗೆ ಅವರ ಬದುಕಲ್ಲಿ ಸಂತಸ ಕಾಣುವ, ಕಾರ್ಯವನ್ನು ಮಾಡುತ್ತಾ ಬಂದಿದೆ.

8 ವರ್ಷಗಳ ಪಯಣಕ್ಕೆ ಸಮಾಜದ ಉದಾರ ದಾನಿಗಳು, ಸಂಸ್ಥೆಯ ಸೇವಾ ಮಾಣಿಕ್ಯರು ಸಹಕಾರ ನೀಡಿದ್ದು ಮತ್ತಷ್ಟು ಬಡ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

error: Content is protected !!