ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಅಧ್ಯಕ್ಷತೆಯಲ್ಲಿ ನಡೆಯಿತು. ಜನರು ನೀಡಿದ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸದಿರುವುದು ಗ್ರಾಮಸ್ಥರ ಅಸಾಮಾಧಾನಕ್ಕೆ ಕಾರಣವಾಯಿತು. ಈ ವೇಳೆ ದಲಿತ ಮುಖಂಡ ಶೇಖರ್ ಎಲ್ .ಮಾತನಾಡಿ ವಾರ್ಡ್ ಹಾಗೂ ಗ್ರಾಮ ಸಭೆಗಳಲ್ಲಿ ಹಲವಾರು ಬೇಡಿಕೆಗಳನ್ನು ಗ್ರಾಮಸ್ಥರು ಪಂಚಾಯತ್ ಮೂಲಕ ತಾಲೂಕು ಮಟ್ಟದ ಇಲಾಖೆಗಳಿಗೆ ನೀಡಿದರೂ ಗ್ರಾಮಸ್ಥರ ಬೇಡಿಕೆಗಳಿಗೆ ಜನಪ್ರತಿನಿಧಿಗಳು,ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ, ಅದ್ದರಿಂದ ಗ್ರಾಮ ಸಭೆ ಮಾಡುವ ಅವಶ್ಯಕತೆ ಏನಿದೆ.ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ನಿದ್ದೆ ಮಾಡುತಿದ್ದಾರೆ ಎಂದು ಆರೋಪಿಸಿ ಗ್ರಾಮ ಸಭೆಯಲ್ಲಿ ಮಲಗಿ ಪ್ರತಿಭಟನೆ ಮಾಡಿದರಲ್ಲದೇ ತಹಶೀಲ್ದಾರ್ ಅಥವಾ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ಗ್ರಾಮ ಸಭೆಗೆ ಬಂದು ಉತ್ತರಿಸಬೇಕು ಇಲ್ಲದಿದ್ದರೆ ನ್ಯಾಯಕ್ಕಾಗಿ ರಾತ್ರಿಯಿಡೀ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟು ಹಿಡಿದರು. ಈ ವೇಳೆ ಜಗನ್ನಾಥ್ ಲಾಯಿಲ ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದರು . ಅಧ್ಯಕ್ಷೆ ಜಯಂತಿ ಎಂ.ಕೆ. ಮಾರ್ಗದರ್ಶಿ ಅಧಿಕಾರಿ, ಪಿಡಿಒ ಸೇರಿದಂತೆ ಪಂಚಾಯತ್ ಸದಸ್ಯರು ಪ್ರತಿಭಟನೆ ಕೈಬಿಟ್ಟು ಗ್ರಾಮ ಸಭೆ ಮುಂದುವರಿಸಲು ಅವಕಾಶ ನೀಡುವಂತೆ ಮನವೊಲಿಸಲು ಪ್ರಯತ್ನ ಪಟ್ಟರೂ ಪ್ರತಿಭಟನೆ ಮುಂದುವರಿಯಿತು. ನೇತಾಜಿ ಬಡಾವಣೆಯಲ್ಲಿರುವ ಖಾಲಿ ಸೈಟ್ ಗಳ ಬಗ್ಗೆ ಅಕ್ರಮ ನಡೆದರೂ ಕ್ರಮ ಕೈಗೊಂಡಿಲ್ಲ ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಆಗ್ರಹಿಸಿದರು , ಈಗಾಗಲೇ ಗ್ರಾಮದಲ್ಲಿ ಸುಮಾರು 400 ಕ್ಕಿಂತಲೂ ಅಧಿಕ ಕುಟುಂಬಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂಕಾಜೆ ಹಾಗೂ ಕನ್ನಾಜೆಯಲ್ಲಿ ನಿವೇಶನಕ್ಕೆ ಮೀಸಲಿರಿಸಿದ ಜಾಗದಲ್ಲಿರುವ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆಯೂ ಚರ್ಚೆ ನಡೆಯಿತು. ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧಾಕರ್ ಬಿ.ಎಲ್. ಮಾತನಾಡಿ ನೇತಾಜಿ ಬಡಾವಣೆಯಲ್ಲದೇ ಗ್ರಾಮದ ವಿವಿಧ ಕಡೆಗಳಲ್ಲಿ ಸರ್ಕಾರಿ ಜಾಗ ಒತ್ತುವರಿ, ಕಟ್ಟಡ ನಿರ್ಮಿಸಿದವರ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸುರೇಶ್ ಬೈರ ಜನರ ಬೇಡಿಕೆಗೆ ಪಂಚಾಯತ್ ಸ್ಪಂದಿಸುತ್ತಿಲ್ಲ ಅದ್ದರಿಂದ ಗ್ರಾಮ ಸಭೆ ಮಾಡುವುದೇ ಬೇಡ ಮುಂದೂಡಿ ಎಂದು ಹೇಳಿದರು. ಈ ವೇಳೆ ಚರ್ಚೆ ಹೆಚ್ಚಾದಾಗ ತಾಲೂಕು ಪಂಚಾಯತ್ ವ್ಯವಸ್ಥಾಪಕ ಪ್ರಶಾಂತ್ ಬಳೆಂಜ ಸಭೆಗೆ ಆಗಮಿಸಿ ಕಾರ್ಯನಿರ್ವಾಹಣಾಧಿಕಾರಿಗಳು ಮೇಲಾಧಿಕಾರಿಗಳ ತುರ್ತು ಮೀಟಿಂಗ್ ನಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಅವರಿಗೆ ಬರಲು ಅಸಾಧ್ಯವಾಗಿದೆ.ಸಭೆಯ ವಿವರಗಳನ್ನು ಇಒ ಅವರ ಗಮನಕ್ಕೆ ತರಲಾಗುವುದು ವಾರದೊಳಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದರು. ನಂತರ ಪ್ರತಿಭಟನೆ ಹಿಂದೆಗೆದುಕೊಳ್ಳಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ನೀಡಿದರು. ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ಕೃಷಿ ಸೇರಿದಂತೆ ಹಲವಾರು ಹಾನಿ ಸಂಭವಿಸಿದ್ದು ಈ ಬಗ್ಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಸೂಚಿಸಿದರು.ಸಭೆಯಲ್ಲಿ ಮಾರ್ಗದರ್ಶಿ ಅಧಿಕಾರಿ ಪ್ರಿಯ ಅಗ್ನೇಸ್, ಪಿಡಿಒ ಶ್ರೀನಿವಾಸ ಡಿ.ಪಿ. ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು . ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ವರದಿ ಮಂಡಿಸಿದರು. ಕಾರ್ಯದರ್ಶಿ ತಾರನಾಥ್ ಕೆ. ನಿರ್ವಹಿಸಿದರು.