ಬೆಂಗಳೂರು: ವಸತಿ ಸೌಕರ್ಯವುಳ್ಳ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ನಗರದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮದ ದಿನ ಸಮೀಪಿಸುತ್ತಿದ್ದು ಆಗಸ್ಟ್ 15ರಂದು ನಗರದಲ್ಲಿ ಕವಾಯತು ಮತ್ತು ಸಮಾರಂಭಗಳು ನಡೆಯಲಿವೆ. ಉಗ್ರಗಾಮಿಗಳು ಬೆಂಗಳೂರು ನಗರವನ್ನು ಗುರಿಯಾಗಿಸಿರುವುದರಿಂದ ಹೋಟೆಲ್‌ಗಳಲ್ಲಿ ತಂಗುವ ವಿದೇಶಿಯರು, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದಿದ್ದಾರೆ.
ವಸತಿ ಗೃಹಗಳಲ್ಲಿ ತಂಗುವವರ ವಿವರಗಳು, ಫೋಟೋ, ಗುರುತಿನ ಚೀಟಿ ಸಮೇತ ದಾಖಲೆ ನಿರ್ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲು ತಮ್ಮ ಸಂಘದ ಸದಸ್ಯರಾಗಿರುವ ಹೋಟೆಲ್ ಮಾಲೀಕರು, ಹೋಟೆಲ್ ಮ್ಯಾನೇಜರ್‌ಗಳು ಹಾಗೂ ಇತರ ನೌಕರರಿಗೆ ತಿಳಿಸಬೇಕು. ಭದ್ರತಾ ಕಾರ್ಯದಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವಂತೆ ಪೊಲೀಸ್ ಆಯುಕ್ತ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.