ಹಾಸನ: ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದ್ದು ಇದರಿಂದ ಬೆಂಗಳೂರಿನಿಂದ ಮಂಗಳೂರು ಮತ್ತು ಮುರುಡೇಶ್ವರ ರೈಲು ಸಂಪರ್ಕ ಸ್ಥಗಿತವಾಗಿದೆ.
ರೈಲುಗಳ ಸಂಚಾರ ಸ್ಥಗಿತಗೊಂಡ ಬೆನ್ನಲ್ಲೆ ಪ್ರಯಾಣಿಕರು ಬಸ್‌ಗಳತ್ತ ಮುಖ ಮಾಡಿದ್ದು ಬಸ್ ಮೂಲಕ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.
ಗುಡ್ಡ ಕುಸಿತವಾದ ಸ್ಥಳದಲ್ಲಿ ರೈಲ್ವೆ ಇಲಾಖೆ ಕಾರ್ಮಿಕರಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದಲ್ಲದೆ ಸಾವಿರಾರು ಪ್ರಯಾಣಿಕರು ಬೆಳಗಿನ ಜಾವದವರೆಗೆ ರೈಲಿನಲ್ಲೇ ಕಳೆದಿದ್ದಾರೆ. ಬಳಿಕ ಇಂದು ಬೆಳಗ್ಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ವಾಹನಗಳ ವ್ಯವಸ್ಥೆ ಮಾಡಿದೆ.
ಗುಡ್ಡ ಕುಸಿದ ಪರಿಣಾಮ ಬೆಂಗಳೂರು-ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಆಲೂರು-ಹಾಸನ ಮಾರ್ಗದ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಒಟ್ಟು 6 ಕಡೆ ರೈಲು ಸಂಚಾರ ನಿಂತಿದೆ.