“11 ವರ್ಷಗಳಿಂದ ಮನವಿ ನೀಡುತ್ತಿದ್ದೇವೆ: ಸ್ವಲ್ಪ ವಿಷ ಆದರೂ ಕೊಡಿ: ನಿಮ್ಮ ಪರಿಹಾರದ ಹಣ ಬೇಡ: ನಮಗೆ ಶಾಶ್ವತ ಪರಿಹಾರ ಬೇಕು : ಜಿಲ್ಲಾಧಿಕಾರಿಯವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಡಿ”

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರಿನ ಅದ್ಯಪಾಡಿ ಗ್ರಾಮ ದ್ವೀಪದಂತಾಗಿದೆ. ಫಲ್ಗುಣಿ ನದಿಯಲ್ಲಿ ನೆರೆ ಬಂದು ಅದ್ಯಪಾಡಿಯ ಮೋಗೆರ್ ಕುದ್ರುವಿನ ಮನೆಗಳು ಜಲಾವೃತವಾಗಿದೆ. ಈ ಹಿನ್ನಲೆ ಆ.02ರಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಇದೇ ವೇಳೆ, ಉಸ್ತುವಾರಿ ಸಚಿವರ ಮುಂದೆ ಮೊಗೇರ್ ಕುದ್ರುವಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರತಿ ಮಳೆಗಾಲದ ಸಂದರ್ಭ ಇದೇ ರೀತಿ ಸಮಸ್ಯೆ ಆಗುತ್ತದೆ. 11 ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿದರೂ ಯಾವುದೇ ಕ್ರಮ ಆಗಿಲ್ಲ. ಈ ಮಳೆಗಾಲದಲ್ಲಿ ಮೂರು ಬಾರಿ ನಮ್ಮ ಮನೆಗಳು ಮುಳುಗಡೆ ಆದವು. ನಮ್ಮ ಕೃಷಿ ಭೂಮಿಗೆ ಹಾನಿ ಆಗಿದೆ. ಪ್ರತಿ ಸಾರಿ ನೀವು ಬಂದು ಹೋಗುವುದು ಮಾತ್ರ ನಡೆಯುತ್ತಿದೆ. ಇದಕ್ಕಿಂತ ನಮಗೆ ಸ್ವಲ್ಪ ವಿಷ ಆದರೂ ಕೊಡಿ ಎಂದಿರುವ ಅವರು, ಮರವೂರು ಕಿಂಡಿ ಅಣೆಕಟ್ಟಿಗೆ ಎಮರ್ಜೆನ್ಸಿ ಗೇಟ್ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ನಮಗೆ ನೀವು ನೀಡುವ ಪರಿಹಾರದ ಹಣ ಬೇಡ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿ’ ಎಂದಿದ್ದಾರೆ.

ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಕಾರ್ಯವನ್ನು ಉಸ್ತುವಾರಿ ಸಚಿವರ ಮುಂದೆ ಮೊಗೇರ್ ಕುದ್ರು ಜನರು ಹೊಗಳಿದ್ದಾರೆ. ‘ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಯವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಡಿ. ಅವರು ಬಹಳ ಒಳ್ಳೆಯ ಅಧಿಕಾರಿ. ಜಿಲ್ಲಾಧಿಕಾರಿಗೆ ನಮ್ಮ ನೋವು ಕೇಳಿಸಿಕೊಳ್ಳುವ ತಾಳ್ಮೆ ಇದೆ’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಜಿಲ್ಲಾಧಿಕಾರಿಯವರು ಮುಂದೆ ಬಡ್ತಿ ಪಡೆಯುತ್ತಾರೆ. ಅವರು ಬಹಳ ಒಳ್ಳೆಯ ಅಧಿಕಾರಿ, ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದರು.

error: Content is protected !!