ಬೆಂಗಳೂರು: ಪ್ರತಿ ಬಾರಿ ಪರೀಕ್ಷಾ ರಿಸಲ್ಟ್ ನಲ್ಲಿ ಕಲ್ಯಾಣ ಕರ್ನಾಟಕ ಹಿಂದೆ ಬೀಳುತ್ತಿದೆ. 19 ಸಾವಿರ ಶಿಕ್ಷಕರ ಕೊರತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೆ. ಶಿಕ್ಷಕರ ಜೊತೆಗೆ ಕೊಠಡಿಗಳ ಸಮಸ್ಯೆ ಇದೆ. ಕೂಡಲೇ ಶಿಕ್ಷಕರ ನೇಮಕ ಮಾಡಬೇಕು ಎಂದು ಬಿಜೆಪಿಯ ತಳವಾರ್ ಸಾಬಣ್ಣ ಅವರು ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಆಗ್ರಹಿಸಿದ್ದು ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
‘ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. 10 ಸಾವಿರ ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆರ್ಥಿಕ ಇಲಾಖೆ ಅನುಮತಿ ಕೊಟ್ಟ ಬಳಿಕ 10 ಸಾವಿರ ಹುದ್ದೆ ನೇಮಕ ಪ್ರಕ್ರಿಯೆ ಶುರು ಮಾಡ್ತೀವಿ. 10 ಸಾವಿರ ಹುದ್ದೆಗಳಲ್ಲಿ 6,500 ಹುದ್ದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡಲಾಗುತ್ತದೆ. ಸದ್ಯ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ಆರ್ಥಿಕ ಇಲಾಖೆ ಅನುಮತಿ ಕೊಟ್ಟ ಬಳಿಕ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ’ ಎಂದರು.