ಚಾರ್ಮಾಡಿ: ನಿಷೇಧಿತ ಫಾಲ್ಸ್ ನಲ್ಲಿ ಹುಚ್ಚಾಟ ನಡೆಸುತ್ತಿದ್ದ ಯುವಕರಿಗೆ ಅವರ ಬಟ್ಟೆ ಹೊತ್ತೊಯ್ದು ಪೊಲೀಸರು ಬುದ್ಧಿ ಕಲಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಡೆದಿದೆ.
ಜಲಪಾತದ ಬಳಿ ಹಾಕಿರುವ ಸೂಚನಾ ಫಲಕಗಳನ್ನೂ ಲೆಕ್ಕಿಸದೇ ಯುವಕರು ಅಪಾಯಕಾರಿ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಎಚ್ಚರಿಕೆ ಕೊಟ್ಟರೂ ಯುವಕರು ಮಾತು ಕೇಳದ ಕಾರಣ ಬಟ್ಟೆಯನ್ನು ಕೊಂಡೊಯ್ದು ಗಸ್ತು ವಾಹನದಲ್ಲಿ ತುಂಬಿದ್ದಾರೆ. ಈ ವೇಳೆ ಯುವಕರು ಬರಿ ಚಡ್ಡಿಯಲ್ಲೇ ಪೊಲೀಸರ ಹಿಂದೆ ಸರ್.. ಬಟ್ಟೆ ಕೊಡಿ ಎಂದು ಕೇಳಿಕೊಂಡಿದ್ದಾರೆ.
ಯುವಕರು ಎಷ್ಟೇ ಕೇಳಿದರೂ ಪೊಲೀಸರು ಮಾತ್ರ ಬಟ್ಟೆ ವಾಪಸ್ ಕೊಡಲಿಲ್ಲ. ಇದರಿಂದ ಯುವಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಬಳಿಕ ಯುವಕರು ಇನ್ನೂ ಹೀಗೆ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಬಳಿಕ ಪೊಲೀಸರು ಬಟ್ಟೆ ಕೊಟ್ಟು ಬುದ್ಧಿವಾದ ಹೇಳಿ ಕಳಿಸಿದ್ದಾರೆ.