ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆ ಅವ್ಯವಸ್ಥೆ ವೀಕ್ಷಿಸಿದ ಪುತ್ತೂರು ಎಸಿ: ಸಂಚಾರ ಯೋಗ್ಯ ರಸ್ತೆ ನಿರ್ಮಿಸುವಂತೆ ಸೂಚನೆ: ಗುತ್ತಿಗೆದಾರರಿಗೆ ಮೂರು ದಿನದ ಕಾಲವಕಾಶ..!

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಮಳೆಗೆ ಸಾಕಷ್ಟು ಸಂಚಾರ ಸಮಸ್ಯೆಗಳು ಕಂಡುಬಂದ ಹಿನ್ನೆಲೆ ಜು.09ರಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಅವರು ಭೇಟಿ ನೀಡಿ ರಸ್ತೆ ಸ್ಥಿತಿ ವೀಕ್ಷಣೆ ನಡೆಸಿದರು.

ಉಜಿರೆ, ಕಾಶಿಬೆಟ್ಟು ಮುಂಡಾಜೆ ಮೊದಲಾದ ಕಡೆ ರಸ್ತೆಯ ಪರಿಸ್ಥಿತಿ ವೀಕ್ಷಿಸಿದ ಅವರು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಮುಂದಿನ ಮೂರು ದಿನಗಳಲ್ಲಿ ರಸ್ತೆಯನ್ನು ಸಂಚಾರ ಯೋಗ್ಯ ಮಾಡಿಕೊಡುವಂತೆ ಸೂಚಿಸಿದರು.

ರಸ್ತೆಯುದ್ದಕ್ಕೂ ಅಲ್ಲಲ್ಲಿ ನಿಂತಿರುವ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ, ನಡೆದಾಡಲು ಸಾಧ್ಯವಾಗದ ಕಡೆಗಳಲ್ಲಿ ಕೆಸರು ತೆರವುಗೊಳಿಸಿ ಜಲ್ಲಿ ಹಾಕುವಂತೆ, ಅಪಾಯಕಾರಿ ಮರಗಳ ತೆರವು, ರಸ್ತೆ ಬದಿ ಇರುವ ವಿದ್ಯುತ್ ಕಂಬಗಳ ಸ್ಥಳಾಂತರ, ಮುಚ್ಚಿ ಹೋಗಿರುವ ಮೋರಿಗಳ ಮಣ್ಣು ತೆರವುಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಹೇಳಿದರು.
ಅವ್ಯವಸ್ಥಿತ ಕಾಮಗಾರಿ ಬಗ್ಗೆ ಗುತ್ತಿಗೆದಾರ ಕಂಪೆನಿಯ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಿ, ಅಗೆದುಹಾಕಲಾದ ಸ್ಥಳಗಳಲ್ಲಿ ಜಲ್ಲಿ ಹಾಕಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಡೆಂಗೆ ಕಾಟ ಕಂಡುಬಂದಿದ್ದು ಅಲ್ಲಲ್ಲಿ ನೀರು ನಿಲ್ಲುವುದು ಅಪಾಯಕಾರಿ. ಇದನ್ನು ಹರಿದು ಹೋಗುವಂತೆ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ತಿಳಿಸಿದಂತೆ ರಸ್ತೆಯನ್ನು ಸಂಚಾರ ಯೋಗ್ಯ ಮಾಡಿಕೊಡುವುದು ಗುತ್ತಿಗೆದಾರರ ಕರ್ತವ್ಯವಾಗಿದೆ. ರಸ್ತೆ ಅಥವಾ ಅಲ್ಲಲ್ಲಿ ನೀರು ನಿಂತಿರುವುದು ಕಂಡು ಬಂದರೆ ತಕ್ಷಣ ಸ್ಥಳೀಯಾಡಳಿತ ಅಥವಾ ತಾಲೂಕು ಆಡಳಿತದ ಗಮನಕ್ಕೆ ತರಬೇಕು ಎಂದರು.


ಈ ಸಂದರ್ಭದಲ್ಲಿ ಸ್ಥಳೀಯರು ಜೊತೆಗಿದ್ದು ಕಳೆದ ಕೆಲವು ದಿನಗಳಿಂದ ಈ ರಸ್ತೆಯು ಮಳೆಗೆ ಕೆಟ್ಟು ಹೋಗಿದ್ದರೂ, ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಳ್ಳದ ಕುರಿತು, ಹಾಗೂ ಸಾಕಷ್ಟು ದ್ವಿಚಕ್ರ ವಾಹನ ಸವಾರರು ಉರುಳಿ ಬೀಳುತ್ತಿರುವ ಕುರಿತು ಎಸಿಯವರಿಗೆ ಮೌಖಿಕ ದೂರು ನೀಡಿದರು.

ಈ ವೇಳೆ ತಹಸೀಲ್ದಾರ್ ಪೃಥ್ವಿ ಸಾನಿಕಂ, ಆರ್ ಐ ಪ್ರತೀಶ್, ಮುಂಡಾಜೆ ವಿಎ ರನಿತಾ,  ಮತ್ತಿತರರು ಜೊತೆಯಲ್ಲಿದ್ದರು.

error: Content is protected !!