ಬೆಳ್ತಂಗಡಿ: ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಪಳದಲ್ಲಿ ಜನ ಸಂಚಾರ ಮಾಡುವ ರಸ್ತೆಗೆ 10 ದಿನಗಳ ಹಿಂದೆ ಬೃಹತ್ ಮರ ಅಡ್ಡಲಾಗಿ ಬಿದ್ದಿದ್ದು ಸಂಚಾರ ಕಷ್ಟಕರವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ ಪರಿಸ್ಥಿತಿಯನ್ನು ಕೇಳುವವರು ಯಾರೂ ಇಲ್ಲ ಎಂದು ಇಲ್ಲಿನ ಸ್ಥಳೀಯರು ನೊಂದಿದ್ದಾರೆ.
ಹರ್ಪಳ ಎಂಬ ಕುಗ್ರಾಮ ಈಗಷ್ಟೇ ಅಭಿವೃದ್ಧಿಯತ್ತ ಮುಖ ಹಾಕಿದ್ದು ಈ ಮಧ್ಯೆ ರಸ್ತೆಗೆ ಮರ ಬಿದ್ದು ಜನ ಸಂಚಾರಕ್ಕೆ ತೊಡಕಾಗಿದೆ. ಈ ಮರ ಅಲ್ಲೇ ಹರಿಯುವ ತೊರೆಗೂ ಅಡ್ಡಲಾಗಿದೆ. ಜೋರು ಮಳೆ ಬಂದು ತೊರೆಯಲ್ಲಿ ನೀರು ಹೆಚ್ಚಾದರೆ ಬಿದ್ದಿರುವ ಮರದಿಂದ ನೀರು ಸುಗವಾಗಿ ಹರಿಯಲಾಗದೆ ಹೆಚ್ಚಿನ ನೀರು ರಸ್ತೆ ಮೇಲೆ ಹರಿಯಲು ಆರಂಭವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಸುಮಾರು 15 ಮನೆಗಳಿದ್ದು, ಮರ ರಸ್ತೆಗೆ ಬಿದ್ದ ಪರಿಣಾಮ ಶಾಲಾ ಮಕ್ಕಳಿಗೆ, ಕೆಲಸ ಕಾರ್ಯಗಳಿಗೆ ಹೋಗುವ ಜನರಿಗೆ ತೊಂದರೆ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಪರಿಸ್ಥಿತಿಯ ಚಿತ್ರಣ ಸಮೇತ ತಿಳಿಸಲಾಗಿದ್ದರೂ ಸಮಸ್ಯೆಯ ಪರಿಹಾರವನ್ನು ಬರೀ ಸೂಚನಾ ಫಲಕಕ್ಕೆ ಸೀಮಿತಗೊಳಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬಿದ್ದಿರುವ ಮರವನ್ನು ಗ್ರಾಮಸ್ಥರಿಗೆ ತೆರವುಗೊಳಿಸಲು ಅಸಾಧ್ಯವಾಗಿರುವ ಕಾರಣ ಈ ಬಗ್ಗೆ ಪಂಚಾಯತ್ ಗಮನ ಹರಿಸಿ ಮರ ತೆರವುಗೊಳಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.