ಬೆಳ್ತಂಗಡಿ: ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಲಾಯಿಲದಲ್ಲಿ ಜೂ.28ರ ಬೆಳಗ್ಗೆ ಸಂಭವಿಸಿತ್ತು.
ಕಿಲ್ಲೂರಿನಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ತಂಗಡಿ ಕಡೆಯಿಂದ ನಡಗೆ ತೆರಳುತ್ತಿದ್ದ ಬೈಕ್ ಮಧ್ಯೆ ಪುತ್ರಬೈಲು ಎಂಬಲ್ಲಿ ಅಪಘಾತ ಸಂಭವಿಸಿ, ಪರಿಣಾಮ ತ್ರೀವ ಗಾಯಗೊಂಡ ಬಳಂಜ ನಿವಾಸಿ, ನಡ ಗ್ರಾಮದ ಕರಣಿಕರ ಕಚೇರಿ ಸಹಾಯಕ ಜಯರಾಜ್(50) ಆಸ್ಪತ್ರೆ ಸೇರಿಸುವ ಮುನ್ನ ಮೃತಪಟ್ಟಿದ್ದರು.
ಪ್ರಕರಣ ಸಂಬಂಧ ಬಸ್ ಚಾಲಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಬಸ್ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದ ಪ್ರಕರಣವನ್ನು ಬೈಕ್ ಸವಾರ ಓವರ್ ಟೇಕ್ ಮಾಡಿ ಬಸ್ ಗೆ ಡಿಕ್ಕಿ ಹೊಡೆದಿದ್ದು ಎಂಬಂತೆ ಘಟನೆಯನ್ನು ತಿರುಚಲು ಪ್ರಯತ್ನ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬೈಕ್ ಸವಾರನ ತಪ್ಪು ಎಂಬಂತೆ ಕಿಡಿಗೇಡಿಗಳು ಮೊದಲೇ ಸುಳ್ಳು ಸುದ್ದಿಗಳನ್ನು ವರದಿ ಮಾಡಿ ಹಬ್ಬಿಸಿದ್ದರು. ಅದಲ್ಲದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಸ್ ಮಾಲೀಕರ ಮಿತ್ರರೊಬ್ಬರು ಬಂದು ತಹಶೀಲ್ದಾರ್ ಜೊತೆ ಪ್ರಕರಣ ತಿರುಚುವ ಬಗ್ಗೆ ಮಾತಾನಾಡಲು ಪ್ರಯತ್ನ ಪಟ್ಟಿದ್ದು ಈ ವೇಳೆ ಅಲರ್ಟ್ ಆದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ತಕ್ಷಣ ಕುಟುಂಬವನ್ನು ಆಸ್ಪತ್ರೆಗೆ ಕರೆಸಿ ಮಾತಾನಾಡಿ ಧೈರ್ಯ ತುಂಬಿ ದೂರು ನೀಡಲು ಪೊಲೀಸ್ ಠಾಣೆಗೆ ಪ್ರತ್ಯಕ್ಷದರ್ಶಿ ಜೊತೆ ಕಳುಹಿಸಿದ್ದು ಅಲ್ಲದೇ ಸ್ವತಃ ತಹಶೀಲ್ದಾರ್ ಬೆಳ್ತಂಗಡಿ ಸಂಚಾರಿ ಠಾಣೆಗೆ ಹೋಗಿ ದೂರಿನ ಬಗ್ಗೆ ಕಾನೂನು ಪ್ರಕಾರ ಮಾಡುವಂತೆ ಹೇಳಿದ ಬಳಿಕ ಬಸ್ ಚಾಲಕನ ವಿರುದ್ಧ ಪ್ರತ್ಯಕ್ಷದರ್ಶಿ ನೀಡಿದ ದೂರಿಗೆ ಪ್ರಕರಣ ದಾಖಲಿಸಲಾಯಿತು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಸಮಯ ಪ್ರಜ್ಞೆ ಹಾಗೂ ಉತ್ತಮ ಸಮಾಜಮುಖಿ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಮೂವರನ್ನು ಬಲಿ ಪಡೆದ ದುರ್ಗಾ ಬಸ್
‘ದುರ್ಗಾ ಬಸ್’ ಈ ಮೊದಲೆ ಇಬ್ಬರನ್ನು ಬಲಿ ಪಡೆದಿದ್ದು ಇಂದು ನಡೆದ ಘಟನೆ ಸೇರಿ ಒಂದು ವರ್ಷದಲ್ಲಿ ಮೂವರನ್ನು ಬಲಿಪಡೆದಂತಾಗಿದೆ. ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ವಸಂತ ಬಂಗೇರ ಎಂಬವರಿಗೆ ಸೇರಿದ ಬಸ್ ಇದಾಗಿದೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಚಾಲಕರ ಅತೀವೇಗದ ಚಾಲನೆ, ನಿರ್ಲಕ್ಷ್ಯತನದ ಚಾಲನೆ, ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ದುರ್ಗಾ ಬಸ್ ಚಾಲಕ ದಿಡುಪೆಯ ಸುದರ್ಶನ್ ವಿರುದ್ಧ ಪ್ರತ್ಯಕ್ಷ ದರ್ಶಿ ನೀಡಿದ ದೂರಿನ ಮೇರೆಗೆ 279, 304(a) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.