ಉಪ್ಪಿನಂಗಡಿ,ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ: ಎಸ್. ಎಸ್. ಎಲ್. ಸಿ ವಿದ್ಯಾರ್ಥಿಯ ಬಂಧನ:

 

 

 

 

ಮಂಗಳೂರು: ತನ್ನ ಚಿಕ್ಕಮ್ಮನ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಆರೋಪದಡಿ ಹತ್ತನೇ ತರಗತಿಯ ವಿದ್ಯಾರ್ಥಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ಸಮೀಪದ ಗ್ರಾಮವೊಂದರ ನಿವಾಸಿಯಾದ 37 ವರ್ಷದ ಮಹಿಳೆ ಆದಿತ್ಯವಾರ ತಡರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಬಾಲಕನನ್ನು ಬಂಧಿಸಿ, ಆಘಾತಕಾರಿ ಅಂಶ ಬಯಲಿಗೆಳೆದಿದ್ದಾರೆ.

ಹತ್ಯೆಯಾದ ಮಹಿಳೆಯ ಮನೆಗೆ ಆಕೆಯ ಅಕ್ಕನ ಮಗ ಆರೋಪಿ ಭಾನುವಾರ ಬಂದಿದ್ದ. ಅಂದು ರಾತ್ರಿ ಅಲ್ಲಿಯೇ ತಂಗಿದ್ದಾನೆ. ತಡರಾತ್ರಿ ಚಿಕ್ಕಮ್ಮ ಮಲಗಿದಲ್ಲಿಗೆ ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿ ಬಾಲಕ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ಪೂರ್ಣ ವಿವರ:

‘ನನ್ನ ಪತ್ನಿ ಆಕೆಯ ತವರು ಮನೆಯಲ್ಲಿ ವಾಸವಿದ್ದು, ಆಕೆ ಮಲಗಿದಲ್ಲಿಯೇ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಮೃತದೇಹದ ಮೇಲಿದ್ದ ಗಾಯದ ಗುರುತುಗಳಿಂದ ಸಂಶಯ ಮೂಡಿತು. ಜೂನ್ 16ರಂದು ರಾತ್ರಿ ಪತ್ನಿಯ ಸಹೋದರಿಯ ಪುತ್ರ ಅಲ್ಲಿಗೆ ಬಂದಿದ್ದ. ಅಂದು ರಾತ್ರಿ ನನ್ನ ಪತ್ನಿಯ ತಾಯಿ, ಪತ್ನಿಯ ಸಹೋದರಿಯ ಪುತ್ರ ಮತ್ತು ನನ್ನ ಪತ್ನಿ ಊಟ ಮಾಡಿ ಮಲಗಿದ್ದರು. ಆ ಬಳಿಕ ರಾತ್ರಿಯಿಂದ ಜೂ.17ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದಿರುವ ಅನುಮಾನ ವ್ಯಕ್ತವಾಗಿದೆ’ ಎಂದು ಆರೋಪಿಸಿ ಮಹಿಳೆಯ ಪತಿ ಉಪ್ಪಿನಂಗಡಿ ಠಾಣೆ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೃತ ಮಹಿಳೆಯ ಪತಿ ನೀಡಿದ ದೂರಿನನ್ವಯ ಆರೋಪಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಾನೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಅಪ್ರಾಪ್ತನನ್ನು ಬಂಧಿಸಿ ಆತನ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಬಾಲಕನನ್ನು ಬಾಲಪರಾಧ ಕೋರ್ಟ್​ಗೆ ಹಾಜರುಪಡಿಸಲಾಗಿದೆ.

error: Content is protected !!