ಮಂಗಳೂರು: ಇತ್ತೀಚೆಗೆ ಹಣ ವಸೂಲಿ ಮಾಡಲು ವಂಚಕರು ಅನೇಕ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಮಕ್ಕಳನ್ನು ಕಿಡ್ನಾಪ್ ಮಾಡಿದ್ದೇವೆ, ನಿಮ್ಮ ಮಗನನ್ನು ಅರೆಸ್ಟ್ ಮಾಡಿದ್ದೇವೆ ಎಂದು ಪೋಷಕರನ್ನು ಬೆದರಿಸಿ ಹಣ ವಸೂಲಿ ಮಾಡುವುದು ಈಗ ಹೆಚ್ಚಾಗಿದೆ. ಈ ಬೆನ್ನಲ್ಲೆ ಇದೀಗ ಪ್ರಸಿದ್ಧ ಕೊರಗಜ್ಜ ಕ್ಷೇತ್ರದ ಭಕ್ತರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಪೇಜ್ ತೆರೆದು ದೇಣಿಗೆ ಸಂಗ್ರಹಿಸಲು ಪ್ರಯತ್ನಿಸಲಾಗಿದೆ. ಈ ಬಗ್ಗೆ ಕುತ್ತಾರಿನ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗ ತನಿಯ ಸೇವಾ ಟ್ರಸ್ಟ್ ನವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
“ಡಿವೋಟೀಸ್ ಆಫ್ ಕುತ್ತಾರು ಕೊರಗಜ್ಜ” ಎಂಬ ನಕಲಿ ಪೇಜ್ ತೆರೆದ ವಂಚಕರು, “ನಾವು ಕಷ್ಟದಲ್ಲಿದ್ದೇವೆ, ಕೊರಗಜ್ಜನ ಭಕ್ತರು ಹಣದ ಸಹಾಯ ಮಾಡಿ. ಪವಾಡಗಳಿಗೆ ನಂಬಿಕೆಯ ಕೀಲಿಕೈ” ಎಂದು ಪೇಜ್‌ನಲ್ಲಿ ಬರೆದುಕೊಳ್ಳಲಾಗಿದೆ. ಅಲ್ಲದೆ ಕೊರಗಜ್ಜನ ಫೋಟೋ ಹಾಕಿ, ಶೈಕ್ಷಣಿಕ ಉದ್ದೇಶಗಳಿಗೆ ದಯವಿಟ್ಟು 200 ರೂ. ಸಹಾಯ ಮಾಡಿ ಎಂಬ ಪೋಸ್ಟ್ ಮಾಡಲಾಗಿದೆ.
ಭಕ್ತರನ್ನು ನಂಬಿಸಲು ಪೇಜ್ ನಲ್ಲಿ ಮತ್ತಷ್ಟು ಬರೆಯಲಾಗಿದೆ. “ದೇವರು ನಮ್ಮನ್ನು ನೋಡುತ್ತಿದ್ದಾನೆ, ಆತನ ಮಾರ್ಗದರ್ಶನ ಯಾವಾಗಲೂ ನಮ್ಮೊಂದಿಗಿದೆ. ಹಣದ ಸಹಾಯಕ್ಕಾಗಿ ಬೇಡಿಕೊಳ್ಳುತ್ತೇನೆ” ಎಂದು ಬರೆಯಲಾಗಿದೆ.
ಈ ಬಗ್ಗೆ ಈಗಾಗಲೆ ದೂರು ದಾಖಲಾಗಿದ್ದಲ್ಲದೆ ಕುತ್ತಾರಿನ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗ ತನಿಯ ಸೇವಾ ಟ್ರಸ್ಟ್ ನವರು, ದೇವಸ್ಥಾನ ಆಡಳಿತನ ಮಂಡಳಿಯವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುಳ್ಳು ಮಾಹಿತಿಯನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.