ಬೆಂಗಳೂರು: ವಾಹನ ಮಾಲಕರಿಗೆ ಹೈಕೋರ್ಟ್ ಸಂತಸದ ಸುದ್ಧಿ ನೀಡಿದೆ. ರಾಜ್ಯದಲ್ಲಿ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮೇ 21ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಜುಲೈ ನಾಲ್ಕರವರೆಗೂ ವಿಸ್ತರಿಸಿದೆ. ಅಲ್ಲದೆ, ಕಠಿಣ ಕ್ರಮ ಕೈಗೊಳ್ಳುವ ಅವಧಿ ವಿಸ್ತರಿಸುವುದಕ್ಕೆ ರಾಜ್ಯ ಸರ್ಕಾರ ಸ್ವತಂತ್ರವಾಗಿರುತ್ತದೆ ಎಂದು ತಿಳಿಸಿದೆ.
ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ವಿಧಿಸಲಾಗಿರುವ ಗಡುವನ್ನು ಮೇ 31ರವರೆಗೆ ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೆಚ್‌ಎಸ್‌ಪಿಸಿ ತಯಾರಿಕಾ ಕಂಪೆನಿಯಾದ ಬಿಎನ್ಡಿ ಎನರ್ಜಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಕಳೆದ ವಿಚಾರಣೆ ವೇಳೆ ನೀಡಿದ್ದ ಆದೇಶ ಇಂದಿಗೆ ಅಂತ್ಯವಾಗಲಿದೆ. ಇದೀಗ ಅವಧಿ ವಿಸ್ತರಣೆ ಮಾಡಬೇಕು. ಅಲ್ಲದೆ, ಅವಧಿ ವಿಸ್ತರಣೆ ಮಾಡುವ ಕುರಿತು ನಿರ್ಧಾರವನ್ನು ನ್ಯಾಯಪೀಠದ ಮುಂದೆ ಪ್ರಸ್ತುತಪಡಿಸಬಹುದು ಎಂದರು.
ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ, ಹೆಚ್‌ಎಸ್‌ಆರ್‌ಪಿ ನಂಬರ್ ಫ್ಲೇಟ್ ಕಡ್ಡಾಯದ ಅವಧಿಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಆಗಸ್ಟ್ ಇಲ್ಲವೇ ಸೆಪ್ಟಂಬರ್‌ವರೆಗೂ ವಿಸ್ತರಿಸಲು ಚಿಂತನೆ ನಡೆಸಿದೆ. ಈ ಸಂಬಂಧ ಒಂದು ವಾರದಲ್ಲಿ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದೆ. ಹೈಕೋರ್ಟ್ ಅನುಮತಿ ನೀಡಿದಲ್ಲಿ ಸರ್ಕಾರ ಅವಧಿ ವಿಸ್ತರಣೆ ಮಾಡಲಿದೆ ಎಂದರು.