ದಾನಿಗಳ ಸಹಕಾರದಲ್ಲಿ ಶಾಲೆಗೆ ಮತ್ತಷ್ಟು ಮೆರುಗು; ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಲಾಡಿ ಲಾಯಿಲ ಪ್ರಾರಂಭೋತ್ಸವ:

 

 

 

 

ಬೆಳ್ತಂಗಡಿ: ದ.ಕ ಜಿ.ಪಂ ಹಿ. ಪ್ರಾ ಶಾಲೆ ಲಾಯಿಲ ಇಲ್ಲಿ 2024-25 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣಾ ಕಾರ್ಯಕ್ರಮ ಮೇ 31 ರಂದು ಶಾಲಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಇಸಿಓ ಚೇತನಾಕ್ಷಿ ರವರು ಇಂದು ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಪೈಪೋಟಿ ನಡೆಸುವ ಹಂತದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಎಲ್ಲವೂ ಉಚಿತವಾಗಿ ನೀಡಿ , ಶಿಕ್ಷಣವನ್ನೂ ಉಚಿತವಾಗಿ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರ್ಪಡೆ ಮಾಡುವ ಮೂಲಕ ಶಾಲೆಯ ಅಭಿವೃದ್ಧಿಯಲ್ಲಿಯೂ ಪೋಷಕರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ನಿವೃತ್ತ ಮುಖ್ಯ ಶಿಕ್ಷಕಿ ರಾಜೇಶ್ವರಿ ಮಾತನಾಡಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರಬಹುದು , ಆದರೆ ಇಲ್ಲಿನ ಸಾರ್ವಜನಿಕರ ಹೃದಯವೈಶಾಲ್ಯ ಶ್ರೀಮಂತವಾದುದು. ಸಾರ್ವಜನಿಕರು , ಪೋಷಕರು ಕೂಡ ಶಾಲೆಯ ಅಭಿವೃದ್ಧಿಯಲ್ಲಿಯೂ ಕೈಜೋಡಿಸುತ್ತಿದ್ದರು ಎಂದರು.

ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಯವರು ಮಾತನಾಡುತ್ತಾ ಈ ಶಾಲೆಯ ವಾತಾವರಣ ಉತ್ತಮವಾಗಿದ್ದು , ಇದು ಇನ್ನಷ್ಟು ಎತ್ತರಕ್ಕೆ ಬೆಳೆಯುವ ಅಗತ್ಯವಿದೆ. 2026 ರಲ್ಲಿ ಅಮೃತ ಮಹೋತ್ಸವ ಆಚರಣೆಯನ್ನು ಅತ್ಯಂತ ವಿಶಿಷ್ಟವಾಗಿ ಆಚರಣೆ ಮಾಡಲು ಈಗಿನಿಂದಲೇ ಕಾರ್ಯಕ್ರಮ ರೂಪಿಸಿ ದುಡಿಯಬೇಕಾಗಿದೆ. ಈಗಾಗಲೇ ದಾನಿಗಳ ಮೂಲಕ ಶಾಲೆಗೆ ಮತ್ತಷ್ಟು ಮೆರುಗು ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿದ್ದು ಊರವರ ಹಾಗೂ ವಿದ್ಯಾಭಿಮಾನಿಗಳ ಸಹಕಾರ ಅತ್ಯಗತ್ಯ ಬೇಕಾಗಿದೆ. ಮಕ್ಕಳಿಗೆ ಬೇಕಾಗುವ ಸಾಮಗ್ರಿಗಳನ್ನು ದಾನಿಗಳ ನೆರವಿನಿಂದ ಕೊಡಿಸುವ ಮೂಲಕ ಖಾಸಗಿ ಶಾಲಾ ಮಕ್ಕಳಿಗೆ ಸಮಾನವಾಗಿ ಕಾಣುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಅತಿಥಿ ಶಿಕ್ಷಕರನ್ನು ಒದಗಿಸುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರು.

ವೇದಿಕೆಯಲ್ಲಿ ಗ್ರಾ.ಪಂ ಸದಸ್ಯೆ ಜಯಂತಿ ಅನ್ನಡ್ಕ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಜಯಂತಿ ಆರಾಧ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಯೋಗೀಶ್ ನಿರೂಪಿಸಿ , ಮಧು ಧನ್ಯವಾದವಿತ್ತರು. ಸಹ ಶಿಕ್ಷಕಿ ಶಾರದಾ ಸಹಕರಿಸಿದರು.

error: Content is protected !!