ಕಲ್ಮಂಜ ಮನೆಯವರನ್ನು ಕಟ್ಟಿ ಹಾಕಿ ದರೋಡೆ ಪ್ರಕರಣ: ಚಿನ್ನಾಭರಣ ಸಹಿತ ಆರೋಪಿಗಳ ಬಂಧನ: ಧರ್ಮಸ್ಥಳ ಪೊಲೀಸರ ಕಾರ್ಯಕ್ಕೆ ಎಸ್.ಪಿ.ಮೆಚ್ಚುಗೆ:

 

 

 

ಬೆಳ್ತಂಗಡಿ; ನಾಲ್ಕು ವರ್ಷದ ಹಿಂದೆ ಕಲ್ಮಂಜ ಗ್ರಾಮದ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿ ಅವರಿಂದ ದರೋಡೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್  ಅವರು ಈ ಬಗ್ಗೆ ಮಾಹಿತಿ ನೀಡಿ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಂಧಿತ ಆರೋಪಿಗಳು ಮುಂಡಾಜೆ ಗ್ರಾಮದ‌ ನಿವಾಸಿಗಳಾದ ನವಾಜ್(38) ರಿಯಾಜ್ ಹಾಗೂ ಬೆಂಗಳೂರಿನ ಕೃಷ್ಣ ಎಂಬವರಾಗಿದ್ದಾರೆ.
ಬಂದಿತ ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ 104ಗ್ರಾಂ ಚಿನ್ನಾಭರಣಗಳನ್ನು, 288ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ ರೂ 25,000 ನಗದನ್ನು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನಲೆ:

2020 ಜೂನ್ 6ರಂದು ರಲ್ಲಿ ಕಲ್ಮಂಜ ಗ್ರಾಮದ ನಿವಾಸಿಯಾಗಿರುವ ಅಚ್ಯುತಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಅಚ್ಯುತ ಭಟ್ ಅವರನ್ನು ಅವರ ತಾಯಿ ಹಾಗೂ ತಮ್ಮನ ಪತ್ನಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಚಿನ್ನ, ಬೆಳ್ಳಿಯ ಆಭರಣಗಳನ್ನು ಹಾಗೂ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.
ಆರೋಪಿಗಳು ಸುಮಾರು 30ರಿಂದ 35ಪವನ್ ಚಿನ್ನಾಭರಣಗಳನ್ನು ಒಂದು ಕೆ.ಜಿ ಬೆಳ್ಳಿಯ ಆಭರಣಗಳನ್ನು ದರೋಡೆ ಮಾಡಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿತ್ತು.
ನಿರಂತರವಾಗಿ ತನಿಖೆ ನಡೆಸಿದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ  ಸಿ ರಿಪೋರ್ಟ್ ಹಾಕಲಾಗಿತ್ತು.

ಚಿನ್ನ ಮಾರುವ ವೇಳೆ ಲಭ್ಯವಾದ ಸುಳಿವು;

ಕಳ್ಳತನ ಮಾಡಿದ್ದ ಆರೋಪಿಗಳು ಜಾಗರೂಕತೆಯಿಂದ ಚಿನ್ನಾಭರಣಗಳನ್ನು ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ಮೇ 22ರಂದು ಆರೋಪಿ ರಿಯಾಜ್ ಎಂಬಾತನು ದಾಖಲೆಯಿಲ್ಲದ ಚಿನ್ನ ಮಾರಾಟಮಾಡಲು ಮುಂದಾಗುತ್ತಿದ್ದಾನೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಆತನಿಂದ ಲಭಿಸಿದ ಮಾಹಿತಿಗಳ‌ ಮೇರೆಗೆ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಗಳಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದ ಪತ್ತೆ ಬಗ್ಗೆ ಸಿ.ಬಿ. ರಿಶ್ಯಂತ್‌ ಪೊಲೀಸ್‌ ಅಧೀಕ್ಷಕರು ,ದ.ಕ ಜಿಲ್ಲೆ,  ಹೆಚ್ಚುವರಿ ಪೊಲೀಸ್‌ ಅದೀಕ್ಷಕರುಗಳಾದ  ಎಂ ಜಗದೀಶ್‌ ಮತ್ತು  ರಾಜೇಂದ್ರ ಡಿ ಎಸ್ ಮತ್ತು ಪೊಲೀಸ್‌ ಉಪಾಧೀಕ್ಷಕರು ಬಂಟ್ವಾಳ  ವಿಜಯ ಪ್ರಸಾದ್‌ ಎಸ್‌ ರವರ ನಿರ್ದೆಶನದಂತೆ,  ವಸಂತ್‌ ಆರ್‌ ಆಚಾರ್‌ ಪೊಲೀಸ್‌ ವೃತ್ತ ನಿರೀಕ್ಷಕರು ಬೆಳ್ತಂಗಡಿ ಗ್ರಾಮಾಂತರ ವೃತ್ತ, ಶ ನಾಗರಾಜ್ ಹೆಚ್.ಇ, ಪೊಲೀಸ್ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ, ಮತ್ತು  ಸುಬ್ಬಾಪುರ ಮಠ, ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ರವರ ಮಾರ್ಗದರ್ಶನದಂತೆ ಧರ್ಮಸ್ಥಳ ಪೋಲಿಸ್‌ ಠಾಣಾ ಪೋಲಿಸ್‌ ಉಪ-ನಿರೀಕ್ಷಕರುಗಳಾದ ಅನಿಲ್ ಕುಮಾರ ಡಿ, ಸಮರ್ಥ ರ ಗಾಣಿಗೇರ ಹಾಗೂ ಸಿಂಬಂಧಿಗಳಾದ ಹೆಚ್.ಸಿ ರಾಜೇಶ ಎನ್‌ , ಹೆಚ್.ಸಿ ಪ್ರಶಾಂತ್‌ ಎಂ , ಹೆಚ್.ಸಿ ಸತೀಶ್‌ ನಾಯ್ಕ್ , .ಹೆಚ್.ಸಿ ಪ್ರಮೋದಿನಿ , ಹೆಚ್.ಸಿ ಶೇಖರ್‌ ಗೌಡ , ಹೆಚ್‌ಸಿ ಕೃಷ್ಣಪ್ಪ, ಆನಿಲ್‌ ಕುಮಾರ್‌, ಜಗದೀಶ್‌, ಮಲ್ಲಿಕಾರ್ಜುನ್‌, ವಿನಯ್‌ ಪ್ರಸನ್ನ , ಗೋವಿಂದರಾಜ್‌, ಭಿಮೇಶ್‌, ನಾಗರಾಜ್‌ ಬುಡ್ರಿ ಹಾಗೂ ಹುಲಿರಾಜ್‌ ಪತ್ತೆ ಕಾರ್ಯಕ್ಕೆ ಸಹಕರಿಸಿರುತ್ತಾರೆ.

error: Content is protected !!