ದಕ್ಷಿಣ ಆಫ್ರಿಕಾ : ದಕ್ಷಿಣ ಕರಾವಳಿಯ ಜಾರ್ಜ್ ನಗರದಲ್ಲಿ ಒಂದು ವಾರದ ಹಿಂದೆ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ ಕಟ್ಟಡ ಕುಸಿದುಬಿದ್ದಿದ್ದು, 6 ದಿನಗಳ ಬಳಿಕ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರೊಬ್ಬರನ್ನು ರಕ್ಷಿಸಲಾಗಿದೆ.
ಗೇಬ್ರಿಯಲ್ ಗುವಾಂಬೆ (32) ಎಂಬವರು 6 ದಿನಗಳ ಕಾಲ ಅವಶೇಷಗಳಡಿ ಸಿಲುಕಿ ಆಹಾರ, ನೀರಿಲ್ಲದೆ ಪರದಾಡಿದ್ದಾರೆ. ರಕ್ಷಣಾ ಸಿಬ್ಬಂದಿಗಳ ನಿರಂತರ ಕಾರ್ಯಾಚರಣೆಯಿಂದ ಇವರನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. 6 ದಿನಗಳ ಬಳಿಕ ವ್ಯಕ್ತಿ ಜೀವಂತವಾಗಿ ಹೊರಬಂದಿದ್ದನ್ನು ಕಂಡ ಜನರ ಕಣ್ಣಾಲಿಗಳು ತೇವಗೊಂಡಿದ್ದವು. ಸದ್ಯ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ.
ಮೇ 6ರಂದು ಕಟ್ಟಡ ಕುಸಿದು ಬಿದ್ದಿದ್ದು ಘಟನೆ ನಡೆದಾಗ ಸ್ಥಳದಲ್ಲಿ 81 ಕಾರ್ಮಿಕರಿದ್ದರು. ಈ ಪೈಕಿ 29 ಜನರನ್ನು ತಕ್ಷಣವೇ ರಕ್ಷಿಸಲಾಗಿದೆ. ಇವರಲ್ಲಿ 12 ಮಂದಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಕ್ಷಣಾ ತಂಡಗಳು ಕ್ರೇನ್‌ಗಳು ಮತ್ತು ಇತರ ಭಾರೀ ಯಂತ್ರೋಪಕರಣಗಳನ್ನು ಬಳಸಿ ಸಾವಿರಾರು ಟನ್‌ಗಳಷ್ಟು ಕಾಂಕ್ರೀಟ್ ಅವಶೇಷಗಳನ್ನು ತೆರವುಗೊಳಿಸುತ್ತಿವೆ. ಅಷ್ಟೇ ಅಲ್ಲದೇ ಸ್ನೈಫರ್ ಶ್ವಾನಗಳನ್ನೂ ಸಹ ಶೋಧ ಕಾರ್ಯಕ್ಕೆ ಬಳಸಲಾಗುತ್ತಿದೆ. ಈ ಮುಖೇನ ಬದುಕುಳಿದವರ ಪತ್ತೆ ಮಾಡಲಾಗುತ್ತಿದೆ. ನಿನ್ನೆ 11 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 20 ಕಾರ್ಮಿಕರು ಕಾಣೆಯಾಗಿದ್ದಾರೆ.
ಇಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಕೆಲಸಗಾರರು ಮೊಜಾಂಬಿಕ್, ಜಿಂಬಾಬ್ವೆ ಮತ್ತು ಮಲಾವಿ ದೇಶಗಳ ಪ್ರಜೆಗಳಾಗಿದ್ದಾರೆ.