ಬೆಂಗಳೂರು: ಮಂಗಳಮುಖಿಯನ್ನು ಹತ್ಯೆಗೈದ ಮಹಿಳೆಯನ್ನು ಜೀವನ್ ಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇ.3ರಂದು ಜೀವನ್ ಭೀಮಾನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಮುರುಗೇಶ್ ಪಾಳ್ಯದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗಳಮುಖಿ ಮಂಜು ನಾಯ್ಕ್ ಅವರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ,, ಮರಣೋತ್ತರ ಪರೀಕ್ಷೆಯಲ್ಲಿ ಮಂಜು ನಾಯ್ಕ್‍ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ತಿಳಿದು ಬಂದಿತ್ತು.
ಪ್ರಕರಣದ ಬೆನ್ನತ್ತಿದ ಪೊಲೀಸರು ಮೃತನೊಂದಿಗೆ ವಾಸವಿದ್ದ ಪ್ರೇಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರೇಮಾ ಹತ್ಯೆಗೈದ ವಿಚಾರ ಬಯಲಾಗಿದೆ.
ಆರೋಪಿ ಪ್ರೇಮಾ ತನ್ನ ಪತಿಯ ನಿಧನದ ಬಳಿಕ ಕಳೆದ 20 ವರ್ಷದಿಂದ ಮಂಜು ನಾಯ್ಕ್ ಜೊತೆ ವಾಸವಿದ್ದಳು. ಮಂಜು ನಾಯ್ಕ್ ಕಂಪನಿಯೊಂದರ ಕ್ಯಾಂಟೀನ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು. ಪ್ರೇಮಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಮಂಜು ಹಾಕಿದ್ದ ಚೀಟಿ ಹಣವನ್ನು ಕೊಡುವಂತೆ ಪ್ರೇಮಾ ಕೇಳಿದ್ದಳು. ಏಪ್ರಿಲ್ 26 ರಂದು ಮದ್ಯದ ಅಮಲಿನಲ್ಲಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಈ ವೇಳೆ ಮಂಜು ನಾಯ್ಕ್ ಪ್ರೇಮಾಳಿಗೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದು, ಆಗ ಪ್ರೇಮ ತಪ್ಪಿಸಿಕೊಳ್ಳುವ ಭರದಲ್ಲಿ ಟವೆಲ್‍ನಿಂದ ಆತನ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾಳೆ ಎಂದುಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಪ್ರೇಮಾ ಬೆಂಗಳೂರಿನಿಂದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿರುವ ತನ್ನ ತಾಯಿಯ ಮನೆಗೆ ತೆರಳಿದ್ದಳು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.