ಮುಟ್ಟಿನ ಸೆಳೆತ: ಪೈನ್ ಕಿಲ್ಲರ್ ಮಾತ್ರೆ ಸೇವನೆ: ಕೋಮಾಗೆ ಜಾರಿದ ಯುವತಿ!

ಮುಟ್ಟಿನ ಸಮಯದಲ್ಲಿ ಅನೇಕ ಮಹಿಳೆಯರಿಗೆ, ಯುವತಿಯರಿಗೆ ಹೊಟ್ಟೆ ನೋವು ಅತಿಯಾಗಿ ಕಾಡುತ್ತಿದೆ. ವಿಪರೀತ ಹೊಟ್ಟೆ, ಸೊಂಟ ನೋವು, ತಲೆನೋವು ತಾಳಲಾರದೆ ಒದ್ದಾಡುತ್ತಾರೆ. ಕೊನೆಗೆ ಆಸ್ಪತ್ರೆಗೆ ತೆರಳಿ ಔಷಧ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಮುಟ್ಟಿನ ಸೆಳೆತಕ್ಕೆ ಪೈನ್ ಕಿಲ್ಲರ್ ಮಾತ್ರೆ ಸೇವಿಸಿ ಕೋಮಾಗೆ ಜಾರಿದ್ದಾಳೆ.

ಬ್ರೆಜಿಲ್‌ನ ಜಾಕ್ವೆಲಿನ್ ಗಮಾಕ್ ಎಂಬ ಯುವತಿ ಮುಟ್ಟಿನ ನೋವು ತಾಳಲಾರದೇ ನೋವು ನಿವಾರಕ ಮಾತ್ರೆ ಸೇವಿಸಿದ್ದಾಳೆ. ಮಾತ್ರೆ ಸೇವಿಸಿದ ಕೆಲ ಹೊತ್ತಿನ ಬಳಿಕ ಕಣ್ಣು ನೋವು ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ಪೋಷಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ಐಸಿಯುಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಕೋಮಾಗೆ ಜಾರಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಜಾಕ್ವೆಲಿನ್, ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಪರಿಣಾಮ ಆಕೆ ತೆಗೆದುಕೊಂಡ ನೋವು ನಿವಾರಕ ಮಾತ್ರೆ ಪ್ರಾಣಕ್ಕೆ ಕಂಟಕವಾಗಿದೆ. ಸದ್ಯ 17 ದಿನಗಳ ಬಳಿಕ ಯುವತಿ ಕೋಮಾದಿಂದ ಹೊರಬಂದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್‍ನ ಲೈಲಾ ಎಂಬ 16 ವರ್ಷದ ಬಾಲಕಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಳು.

ಮುಟ್ಟಿನ ಸಮಯ ಹತ್ತಿರವಾಗುವ ಸಂದರ್ಭದಲ್ಲಿ ಯುವತಿಯರಿಗೆ ಹಾಗೂ ಮಹಿಳೆಯರಿಗೆ ಹೆಚ್ಚಾಗಿ ತಲೆನೋವು, ಹೊಟ್ಟೆನೋವು, ವಾಂತಿ, ಭೇದಿ, ಕೋಪ, ಮಾನಸಿಕ ಹಿಂಸೆಗಳು ಆರಂಭವಾಗುತ್ತದೆ. ಅದರಲ್ಲಿಯೂ ಹೆಚ್ಚಿನವರು ಹೊಟ್ಟೆನೋವಿನಿಂದ ಬಳಲುವಂತಾಗಿದೆ. ಸಾಧ್ಯವಾದಷ್ಟು ದೇಹಕ್ಕೆ ತಂಪು ನೀಡುವ ಆಹಾರ ಸೇವಿಸೋದರಿಂದ ಇಂತಹ ನೋವಿಗೆ ಪರಿಹಾರ ಕಾಣಬಹುದು. ಹೊರತಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದು ಪ್ರಾಣಕಂಟಕವಾಗಬಹುದು.

error: Content is protected !!