ರಾಜಸ್ಥಾನ: ಬಾರ್ಮರ್ ಜಿಲ್ಲೆಯ ಗಡಿ ಪ್ರದೇಶಗಳಾದ ಚೌಹಾತಾನ್ ಮತ್ತು ಧೋರಿಮಣ್ಣಾ ಭಾಗಗಳಲ್ಲಿ ಏ.28ರಂದು ಮಧ್ಯರಾತ್ರಿ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕು ಗೋಚರವಾಗಿ ಭಾರೀ ಪ್ರಮಾಣದ ಸದ್ದಿನೊಂದಿಗೆ ನಿಗೂಢ ವಸ್ತು ಭೂಮಿಗೆ ಅಪ್ಪಳಿಸಿದೆ.
ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕು ಗೋಚರವಾಗಿ ಬಳಿಕ ಭಾರೀ ಪ್ರಮಾಣದ ಸದ್ದಿನೊಂದಿಗೆ ಆ ಬೆಳಕು ಭೂಮಿಗೆ ಪ್ರವೇಶ ಪಡೆದು ಯಾವುದೋ ವಸ್ತು ಆಕಾಶದಿಂದ ಭೂಮಿಗೆ ಬಿದ್ದಂತಾಗಿದೆ. ಆದರೆ, ಮುಂದೆ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಸದ್ದು ಕೇಳಿದರೆ ಅದು ಉಲ್ಕಾಶಿಲೆ ಇರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಇದುವರೆಗೂ ಈ ಪ್ರದೇಶದಲ್ಲೆಲ್ಲೂ ಅಹಿತಕರ ಘಟನೆಯಾಗಲಿ, ಯಾವುದೇ ಕುರುಹುಗಳಾಗಲಿ ಸಿಕ್ಕಿಲ್ಲ. ಸಧ್ಯ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ತನಿಖೆಯ ನಂತರವಷ್ಟೇ ಈ ಬಗ್ಗೆ ನಿಖರ ಮಾಹಿತಿ ತಿಳಿದುಬರಬೇಕಿದೆ.