ಬೆಳ್ತಂಗಡಿ: ಲೋಕಸಭೆ ಚುನಾವಣೆಗೆ ಎರಡನೇ ಹಂತದ (ಕರ್ನಾಟಕದಲ್ಲಿ ಮೊದಲ ಹಂತ) ಮತದಾನ ಇಂದು ನಡೆಯುತ್ತಿದ್ದು ಬೆಳ್ತಂಗಡಿ
ತಾಲೂಕಿನ ನೆರಿಯ ಗ್ರಾಮದ ಬಾಂಜಾರು ಮಲೆಯಲ್ಲಿ ಶೇ.100 ಮತದಾನವಾಗಿದೆ. ಬಾಂಜಾರು ಮಲೆಯ ಸಮುದಾಯ ಭವನದಲ್ಲಿ ನಡೆದ ಮತದಾನದಲ್ಲಿ ಎಲ್ಲರೂ ತಮ್ಮ ಹಕ್ಕುಗಳನ್ನು ಚಲಾಯಿಸಿ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನೂರು ಶೇಖಡಾ ಮತದಾನವಾದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಬಾಂಜಾರು ಮಲೆ ಮತಗಟ್ಟೆಯಲ್ಲಿ 4 ಗಂಟೆಯ ಸುಮಾರಿಗೆ ಶೇ.100 ಮತದಾನವಾಗಿದೆ. ಸಂಜೆ 6 ಗಂಟೆಗೆ ಮತದಾನ ಮುಗಿಯಲಿದೆ. ಇನ್ನೂ ಸಮಯವಿದ್ದು, ಎರಡು ಗಂಟೆ ಮೊದಲೇ ಈ ಮತಗಟ್ಟೆಯಲ್ಲಿ ಶೇ.100 ಮತದಾನ ದಾಖಲಾಗಿದೆ. ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾರರಿರುವ ಮತಗಟ್ಟೆ ಇದಾಗಿದ್ದು. ಇಲ್ಲಿ 111 ಮತದಾರರಿದ್ದು ಎಲ್ಲರೂ ಇಲ್ಲಿ ಮತ ಚಲಾಯಿಸಿದ್ದಾರೆ.