ತುಮಕೂರು, ಕಾರಿಗೆ ಬೆಂಕಿ ಹಚ್ಚಿ ಬೆಳ್ತಂಗಡಿಯ ಮೂವರ ಹತ್ಯೆ ಪ್ರಕರಣ: ಕೊಲೆಗೆ ಚಿನ್ನದ ಆಮಿಷ ಒಡ್ಡಿದ ಪ್ರಮುಖ ಆರೋಪಿ:

 

 

ಬೆಳ್ತಂಗಡಿ : ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಕಾರಿಗೆ ಬೆಂಕಿ ಹಚ್ಚಿ ಬೆಳ್ತಂಗಡಿಯ ಮೂವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸರು ಒಟ್ಟು ಎರಡು ಜನರನ್ನು ಬಂಧಿಸಿದ್ದು ಉಳಿದ ಆರು ಜನರಿಗಾಗಿ ಬಲೆ ಬೀಸಿದ್ದಾರೆ. ಈ ಬಗ್ಗೆ ತುಮಕೂರು ಎಸ್ಪಿ ಅಶೋಕ್ ಕೆವಿ ಮಾ.25 ರಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಮಾ 22 ರ ಮಧ್ಯಾಹ್ನ ಸುಮಾರು 1.15 ಗಂಟೆಗೆ ಕೋರಾ ಪೊಲೀಸ್ ಠಾಣಾವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ 3 ಮನುಷ್ಯರ ದೇಹಗಳು ಸುಟ್ಟ ಸ್ಥಿತಿಯಲ್ಲಿರುವ ಬಗ್ಗೆ ಬಂದ ಮಾಹಿತಿಯಂತೆ ಕೋರಾ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಯಾರೋ ದುಷ್ಕರ್ಮಿಗಳು ಯಾರೋ 3 ಜನರನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಪೆಟ್ರೋಲ್ ಅಥವಾ ಬೇರಾವುದೋ ಇಂಧನ ಸುರಿದು ಬೆಂಕಿ ಹಚ್ಚಿ ಸುಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಅದರಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಂತರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ, ಐ.ಪಿ.ಎಸ್ ರವರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿ ಮರಿಯಪ್ಪ ಮತ್ತು ಬಿ.ಎಸ್ ಅಬ್ದುಲ್ ಖಾದರ್ ಕೆ.ಎಸ್.ಪಿ.ಎಸ್ ರವರ ಸೂಚನೆ ಮತ್ತು ಮಾರ್ಗದರ್ಶನದಂತೆ ತುಮಕೂರಿನ ಪೊಲೀಸರ ತಂಡ ವಿಚಾರಣೆ ನಡೆಸಿದಾಗ ಕರಾಳ ದಂಧೆಯು ಬೆಳಕಿಗೆ ಬಂದಿದೆ.

ಇಬ್ಬರು ಆರೋಪಿಗಳ ಬಂಧನ, ಆರು ಜನರಿಗಾಗಿ ಶೋಧ
ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತುಮಕೂರಿನ
ಶಿರಾ ಗೇಟ್‌ನಲ್ಲಿ ವಾಸವಿರುವ 1) ಪಾತರಾಜು ಯಾನೆ ರಾಜು ಅಲಿಯಾಸ್ ರಾಜಗುರು ಯಾನೆ ಕುಮಾರ್ ,ಇನ್ನೋರ್ವ ಆರೋಪಿ ಸತ್ಯ ಮಂಗಲ ನಿವಾಸಿ ಗಂಗರಾಜ್ ಬಿನ್ ಹನುಮಂತ ರಾಯಪ್ಪ ಎಂಬವರನ್ನು ಬಂಧಿಸಿ ಇನ್ನಿತರರಿಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಕೊಲೆಯಾದ ಬೆಳ್ತಂಗಡಿ ತಾಲೂಕಿನ‌ ಮದ್ದಡ್ಕದ ಇಸಾಕ್ ಸೀಮಮ್, ಉಜಿರೆಯ ಶಾಹುಲ್ ಹಮೀದ್, ಶಿರ್ಲಾಲಿನ ಸಿದ್ದಿಕ್ ಇವರಿಗೆ ಪಾತರಾಜನ ಜೊತೆ ಸುಮಾರು 6-7 ತಿಂಗಳಿನಿಂದ ಸಂಪರ್ಕವಿತ್ತು. ಇವರೆಲ್ಲಾ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದು, ಪಾತರಾಜನಿಗೆ ಸುಮಾರು 6 ಲಕ್ಷ ರೂ ಹಣ ನೀಡಿದ್ದರು. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಪಾತರಾಜನ ಹಿಂದೆ ಬಿದ್ದಿದ್ದರಿಂದ ಅವರನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಪಾತರಾಜು ತನಗೆ ಪರಿಚಯದ ಸತ್ಯಮಂಗಲದ ವಾಸಿ ಗಂಗರಾಜು ಮತ್ತು ಅವನ 6 ಜನ ಸಹಚರರಾದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್, ನವೀನ್, ವೆಂಕಟೇಶಪುರದ ಕೃಷ್ಣ, ಹೊಂಬಯ್ಯನಪಾಳ್ಯದ ಗಣೇಶ, ನಾಗಣ್ಣನಪಾಳ್ಯದ ಕಿರಣ್, ಕಾಳಿದಾಸನಗರದ ಸೈಮನ್, ಸೇರಿಸಿಕೊಂಡು ಮೂರು ಜನರನ್ನು ಕೊಲೆ ಮಾಡಲು ಸ್ಕೆಚ್ ಮಾಡಿ ಕೊಲೈಗೈದಿದ್ದರು.
ಕೊಲೆಗಾರರಿಗೂ 3 ಕೆ ಜಿ ಚಿನ್ನ ಕೊಡೋದಾಗಿ ಹೇಳಿದ್ದ ಪ್ರಕರಣದ ಮಾಸ್ಟರ್ ಮೈಂಡ್ ಪಾತರಾಜು
ಇನ್ನು ಕೊಲೆ ಮಾಡುವ ಪ್ಲ್ಯಾನ್ ವೇಳೆ ಪ್ರಕರಣದ ಮಾಸ್ಟರ್ ಮೈಂಡ್ ಪಾತರಾಜು ಕೊಲೆಗಾರರಿಗೂ 3 ಕೆ.ಜಿ ಚಿನ್ನ ಕೊಡೋದಾಹಿ ಆಸೆ ತೋರಿಸಿದಂತೆ. ದಿನಾಂಕ: ಮಾ22. ರಂದು ಮಧ್ಯರಾತ್ತಿ 12 ಗಂಟೆ ಸುಮಾರಿಗೆ ಮೃತರನ್ನು ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡುಅವರುಗಳನ್ನು ಮಚ್ಚು, ಲಾಂಗ್ ಮತ್ತು ಡ್ಯಾಗರ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಅವರದೇ ಕಾರಿನಲ್ಲಿ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು ಇನ್ನುಳಿದಂತೆ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂದನ್(24) , ಸಂತೇಪೇಟೆಯ ನವೀನ್(24) ,ವೆಂಕಟೇಶಪುರದ ಕೃಷ್ಣ(22), ಹೊಂಬಯ್ಯನಪಾಳ್ಯದ ಗಣೇಶ್(19), ನಾಗಣ್ಣನಪಾಳ್ಯದ ಕಿರಣ್(23) ,ಕಾಳಿದಾಸನಗರದ ಸೈಮನ್(18) ಪರಾರಿಯಾಗಿದ್ದು ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ..

error: Content is protected !!