ಬೆಂಗಳೂರು : ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿ ಬಹುಮತಗಳಿಂದ ರಾಜ್ಯದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಇದೀಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಭರ್ಜರಿ ಗ್ಯಾರಂಟಿ ಘೋಷಿಸಿ ಅಧಿಕಾರ ಸ್ಥಾಪಿಸುವ ತಂತ್ರ ರೂಪಿಸಿದೆ. ಈ ಹಿನ್ನಲೆ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ ನೀಡುವುದಾಗಿ ಗ್ಯಾರಂಟಿ ನೀಡಿದೆ.
ಮುಂಬರುವ ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದ ಮೂಲಕ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ ದೇಶದ ಬಡಕುಟುಂಬಗಳ ಯಜಮಾನಿಯರಿಗೆ ತಲಾ ರೂ.1 ಲಕ್ಷ ಆರ್ಥಿಕ ನೆರವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ. ಇದಕ್ಕೆ ನಮ್ಮ ಸರ್ಕಾರದ ಸಾಧನೆಗಳು ಸಾಕ್ಷಿ’ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮೀ ಯೋಜನೆ ಮೂಲಕ ಪ್ರತೀ ತಿಂಗಳು ಖಾತೆಗೆ 2000ರೂ ಜಮೆ, ಅನ್ನಭಾಗ್ಯ, ಉಚಿತ ವಿದ್ಯುತ್ ಇವೆಲ್ಲವನ್ನೂ ನೀಡಿ ಗ್ಯಾರಂಟಿ ಭರವಸೆಯನ್ನು ಉಳಿಸಿಕೊಂಡಿದೆ. ಈಗ ಲೋಕಸಭಾ ಚುನಾವಣೆಯನ್ನೂ ಅದೇ ಗ್ಯಾರಂಟಿಯೊಂದಿಗೆ ಗೆಲ್ಲಲು ಸಜ್ಜಾಗುತ್ತಿದೆ.
ಈ ಯೋಜನೆಯಡಿಯಲ್ಲಿ ದೇಶಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವ ಬಡಕುಟುಂಬಗಳ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ಹಣಕಾಸಿನ ನೆರವು ನೀಡಲು ನಿರ್ಧರಿಸಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ಜಮೆ ಮಾಡಲಾಗುತ್ತದೆ ಎಂದಿದ್ದಾರೆ.