ಬೆಂಗಳೂರು: ಪಕ್ಷದಲ್ಲಿ ಇದ್ದು, ಪಕ್ಷಕ್ಕಾಗಿ ದುಡಿದು, ಜನ ಬೆಂಬಲ ಪಡೆದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯೋದೆ ಒಂದು ದೊಡ್ಡ ಸವಾಲು. ಆದರೆ ಬಿಜೆಪಿ ಮಾತ್ರ ಈ ಬಾರಿ ಹೊಸ ಆಟ ಶುರುಮಾಡಿ ಲೋಕಸಭಾ ಚುನಾವಣೆ ಗೆಲ್ಲಲು ಕಸರತ್ತು ಮಾಡಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಳ್ಳದ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಅವರಿಗೆ ಟಿಕೆಟ್ ನೀಡಿ ಆಶ್ಚರ್ಯ ಹುಟ್ಟಿಸಿದೆ.
ರಾಜಕೀಯ ಕ್ಷೇತ್ರವನ್ನು ಪ್ರವೇಶ ಮಾಡದ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಅವರಿಗೆ ಟಿಕೆಟ್ ಪ್ರಕಟಿಸಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲಲು ಸಿದ್ಧತೆ ಮಾಡಿಕೊಂಡಿದೆ.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ ಎನ್ ಮಂಜುನಾಥ್ ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾಗಿದ್ದು, ರಾಜಕೀಯ ಕ್ಷೇತ್ರ ಪ್ರವೇಶದ ಅಪೇಕ್ಷೆ ವ್ಯಕ್ತಪಡಿಸಿದ್ದರು. ಮಂಜುನಾಥ್‌ರನ್ನು ಸಂಪರ್ಕಿಸಿದ ಬಿಜೆಪಿ ನಾಯಕರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಗುವಂತೆ ಮಾತುಕತೆ ನಡೆಸಿದ್ದು, ಅವರು ಸಮ್ಮತಿ ಸೂಚಿಸುತ್ತಿದಂತೆ ಹೈಕಮಾಂಡ್ ನಾಯಕರ ಸಂಪರ್ಕ ಮಾಡಿ ಮೊದಲ ಪಟ್ಟಿಯಲ್ಲೇ ಅವರ ಹೆಸರು ಪ್ರಕಟಗೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ಡಾ. ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದನ್ನು ನೋಡಿದ್ರೆ ಬಿಜೆಪಿಯ ವ್ಯಕ್ತಿಯೇ ಅಲ್ಲದವರಿಗೆ ಬಿಜೆಪಿ ಟಿಕೆಟ್ ನೀಡಿದೆ ಅಂತ ಅನ್ನಿಸುತ್ತದೆ. ಆದರೆ ಇವರು ಇನ್ನೆರಡು ದಿನದ ನಂತರ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷ ಸೇರಲಿದ್ದಾರೆ. ಇವರು ಬಿಜೆಪಿಗೆ ಬರುತ್ತಿರುವುದರಿಂದ ಪಕ್ಷಕ್ಕೆ ಶಕ್ತಿ ಬರಲಿದೆ ಎನ್ನುವ ವಿಶ್ವಾಸವನ್ನು ಬಿಜೆಪಿಯವರು ವ್ಯಕ್ತಪಡಿಸಿದ್ದಾರೆ.