ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾ! ಬೃಜೇಶ್ ಚೌಟ ಆಯ್ಕೆ: ಅಭಿನಂದನೆ ಸಲ್ಲಿಸಿದ ನಳಿನ್ ಕುಮಾರ್ ಕಟೀಲ್: 3 ಲಕ್ಷ ಮತಗಳ ಅಂತರದಿಂದ ಗೆಲುವು:

 

 

ಬೆಳ್ತಂಗಡಿ:ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಂಡ ಬಳಿಕ ಮಂಗಳೂರಿನಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲು, ಪ್ರಸಕ್ತ ಬದಲಾವಣೆ ಬಗ್ಗೆ ಮಾತುಕತೆ ಆಗಿಲ್ಲ. ಬಿಜೆಪಿ ಗೆಲುವಿಗೆ ನಾನು ಸಹಕಾರ ಕೊಡುತ್ತೇನೆ. ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು. ಬಿಜೆಪಿ ಅಭ್ಯರ್ಥಿಯಾಗಿರುವ ಕ್ಯಾ ಬ್ರಿಜೇಶ್ ಚೌಟ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಅಭಿಮತ ವ್ಯಕ್ತಪಡಿಸಿದರು.ಬಿಜೆಪಿ ನನಗೆ 15 ವರ್ಷ ದೊಡ್ಡ ಅವಕಾಶ ಕೊಟ್ಟಿದೆ. ಈ ಕ್ಷೇತ್ರದ ಸಂಸದನಾಗಲು ಪಕ್ಷದ ಹಿರಿಯರು ಅವಕಾಶ ಕೊಟ್ಟಿದ್ದಾರೆ. ನನ್ನನ್ನು ಕಾರ್ಯಕರ್ತರು ಆಹೋರಾತ್ರಿ ದುಡಿದು ಗೆಲ್ಲಿಸಿದ್ದಾರೆ. ಕ್ಷೇತ್ರದ ಮತದಾರರು ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು. ನಾನು ಪ್ರಾಮಾಣಿಕ ರಾಜಕಾರಣವನ್ನು ಮಾಡಿದ್ದೇನೆ. ಕ್ಷೇತ್ರಕ್ಕೆ 1 ಲಕ್ಷ ಕೋಟಿ ಅನುದಾನವನ್ನು ತಂದಿದ್ದೇನೆ. ಯುಪಿಎ ಅವಧಿಯ ಐದು ವರ್ಷ, ಮೋದಿ ಅವಧಿಯ ಹತ್ತು ವರ್ಷದಲ್ಲಿ ನನಗೆ ಅವಕಾಶ ಸಿಕ್ಕಿದೆ. ಜಿಲ್ಲೆಗೆ ಯೋಜನೆ ತರಲು ಅವಕಾಶ ಸಿಕ್ಕಿದೆ. ಪಕ್ಷದ ಹಿರಿಯರು ಬೆಳೆಸಿದ್ದಾರೆ. ಸಂಘ ಪರಿವಾರದವರು ಆಶೀರ್ವದಿಸಿದ್ದಾರೆ. ರಾಜಕಾರಣಕ್ಕೆ ಹೊಸ ಯುವಕರು ಬರಬೇಕು. ಕಾರ್ಯ ಚಟುವಟಿಕೆ ವಿಸ್ತಾರವಾಗಬೇಕು ಎಂದು ಪಕ್ಷದ ಹಿರಿಯರು ಈ ನಿರ್ಧಾರ ತೆಗೆದುಕೊಂಡಿದ್ದು, ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು.

ರಾಜ್ಯದ ಉಪಾಧ್ಯಕ್ಷನಾಗಿ, ಕೇರಳ ರಾಜ್ಯದ ಸಹ ಪ್ರಭಾರಿಯಾಗಿ, ರಾಜ್ಯಾಧ್ಯಕ್ಷನಾಗಿ ನಾಲ್ಕೂವರೆ ವರ್ಷದ ಬಹುದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಇದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. 15 ವರ್ಷ ಸಂಸದನಾಗಿದ್ದಾಗ, ನಾಲ್ಕೂವರೆ ವರ್ಷ ರಾಜ್ಯಾಧ್ಯಕ್ಷನಾಗಿದ್ದಾಗ ಕಾರ್ಯಕರ್ತರು , ಜನರು ಸಹಕಾರ ಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಲ ಸಂಸದನಾಗಿ ಕೆಲಸ ಮಾಡಿದ್ದೇನೆ. ನನಗೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದರು.ಬಿಜೆಪಿ ಕಾರ್ಯಕರ್ತನಾಗಿ ಪಕ್ಷ ಹೇಳಿದ ಕೆಲಸ ಮಾಡುತ್ತೇನೆ. ಮೋದಿ ಪ್ರಧಾನಿಯಾಗಲು ಬ್ರಿಜೇಶ್ ಚೌಟ ಅವರಿಗೆ ಎಲ್ಲರೂ ಬೆಂಬಲಿಸಬೇಕು. ಕ್ಷೇತ್ರದ ನನ್ನ ಯೋಜನೆಗಳನ್ನು ಪೂರ್ಣಗೊಳಿಸಲು ಬ್ರಿಜೇಶ್ ಅವರನ್ನು ಆಯ್ಕೆ ಮಾಡಬೇಕು. ಅವರನ್ನು ಗೆಲ್ಲಿಸಲು ಓಡಾಟ ಮಾಡುತ್ತೇನೆ. ಕಳೆದ ಬಾರಿ 2.72 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದು, ಈ ಬಾರಿ 3 ಲಕ್ಷ ಮತಗಳ ಅಂತರದಿಂದ ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ನಾಯಕರು ಸರಿಯಾಗಿ ಯೋಚಿಸಿಯೆ ಈ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದ ಕೆಲಸ ಮಾಡಲು ಜನ ಬೇಕು. ನಾನು ಪಕ್ಷದ ಕಟ್ಟಾಳು, ಪಕ್ಷ ಹೇಳಿದ್ದನ್ನು ಮಾಡುತ್ತೇನೆ . ನಾನು ವಾಜಪೇಯಿ ಹೇಳಿದಂತೆ ಕಾರ್ಯಕರ್ತ ಎನ್ನುವ ಹುದ್ದೆಯೆ ದೊಡ್ಡದೆಂದು ನಂಬಿದ್ದೇನೆ ಎಂದು ತಿಳಿಸಿದರು.

 

 

error: Content is protected !!