ಬೆಳ್ತಂಗಡಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಉದ್ಧೇಶದಿಂದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮವು ಮಾ.09ರಂದು ಗುರುವಾಯನಕೆರೆ ಕಿನ್ಯಮ್ಮ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ 4 ಗ್ಯಾರಂಟಿ ಅನುಷ್ಠಾನ ಮಾಡಿದೆ. ಸ್ವಾಮಿ ವಿವೇಕಾನಂದರ ಬೋಧನೆಯಂತೆ ಯುವಸಬಲೀಕರಣಕ್ಕಾಗಿ ಯುವನಿಧಿಯನ್ನು ಕಾರ್ಯ ರೂಪಕ್ಕೆ ತಂದಿದ್ದೇವೆ. ಬಡವರು ಹಸಿವಿನಿಂದ ಬಳಲಬಾರದು ಎಂದು 1.ರೂ ಅಕ್ಕಿಯನ್ನು ಉಚಿತವಾಗಿ ನೀಡಿದ್ದೇವೆ. ಇದರಿಂದ ಬಡವರೂ 3 ಹೊತ್ತು ಊಟ ಮಾಡುತ್ತಿದ್ದಾರೆ ಎಂದರು.
ಶಕ್ತಿ ಯೋಜನೆ ಆರಂಭವಾದಗಿಂದ ಮಹಿಳೆಯರಿಗೆ ಉಚಿತ ಪ್ರಯಾನದ ಸುಯೋಗ ಸಿಕ್ಕಿದೆ. ಎಲ್ಲ ಮಹಿಳೆಯರಿಗೂ ಸಮಾನವಾದ ಅವಕಾಶ ನೀಡಿ, ಉಚಿತವಾಗಿ ಪ್ರಯಾಣಿಸುವ ಭಾಗ್ಯ ಸಿಕ್ಕಿದೆ. ಮಹಿಳೆಯರು ದೇವಸ್ಥಾನ, ಸಂಬಂಧಿಕರ ಮನೆಗೆ, ಆಸ್ಪತ್ರೆಗೆ ತಮ್ಮ ಅಗತ್ಯತೆಗಳಿಗೆ ಆರಾಮವಾಗಿ ಪ್ರಯಾಣಿಸುತ್ತಿದ್ದಾರೆ. ಇದು ಮಹಿಳೆಯರಿಗೆ ನಿಜವಾಗಲೂ ಶಕ್ತಿ ಕೊಟ್ಟಿದೆ. ಇದರ ಜೊತೆಗೆ ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರ ಖಾತೆಗೆ ನೇರವಾಗಿ 2 ಸಾವಿರ ರೂ ಮಂಜೂರಾಗುತ್ತಿರುವ ಕಾರಣ ಅದನ್ನು ಅವರಿಗೆ ಬೇಕಾದ ಹಾಗೆ ಬಳಸಿ ಮತ್ತೆ ತೆರಿಗೆ ರೂಪದಲ್ಲಿ ಸರಕಾರಕ್ಕೆ. ಗೃಹ ಜ್ಯೋತಿ ಮೂಲಕ 200 ಯೂನಿಟ್ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ 2% ಜನರಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗದೇ ಇರಬಹುದು. ಆದರೆ ಈ ಎಲ್ಲಾ ಸಮಸ್ಯೆಗೂ ಸರಕಾರದಿಂದ ಪರಿಹಾರ ಸಿಗಲಿದೆ ಎಂದರು.
ಈ ಪಂಚ ಗ್ಯಾರಂಟಿ ಜಾರಿಯಾಗಲು ಕಾರಣ ರಾಹುಲ್ ಗಾಂಧಿ ಅವರು. ಭಾರತ ಜೋಡೋ ಪಾದಯಾತ್ರೆ ಸಂದರ್ಭ ಅವರು ಆಲಿಸಿದ ಸಮಸ್ಯೆಗಳ ಫಲವಾಗಿ ಪಂಚ ಗ್ಯಾರಂಟಿಗಳ ಚಿಂತನೆ ಬರಲು ಸಾಧ್ಯವಾಗಿದೆ. ಬದುಕು ಮತ್ತು ಭಾವನೆಯ ಮಧ್ಯೆ ರಾಜಕೀಯ ಮಾಡುವ ಪಕ್ಷಗಳ ಮಧ್ಯೆ ಬದುಕು ಕಟ್ಟುವ ಕಡೆಗೆ ನಾವು ಸಾಗಬೇಕಾಗಿದೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ನೀಡುವ ಹಣದಿಂದ ರಾಜ್ಯ ಖಂಡಿತ ದಿವಾಳಿಯಾಗುವುದಿಲ್ಲ. ಆದರೆ ಶ್ರೀಮಂತರ ಸಾಲ ಮನ್ನಾ ಮಾಡುವುದರಿಂದ ದೇಶ ದಿವಾಳಿಯಾಗುವುದು ಎಂದರು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಡಾ. ಆನಂದ ಕೆ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು, ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ತಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಉಭಯ ಬ್ಲಾಕ್ ಅಧ್ಯಕ್ಷರುಗಳಾದ ನಾಗೇಶ್ ಕುಮಾರ್, ಸತೀಶ್ ಕಾಶಿಪಟ್ನ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ ಸ್ವಾಗತಿಸಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಪ್ರಸ್ತಾವಿಸಿ, ವಂದಿಸಿದರು, ಬೆಳ್ತಂಗಡಿ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು.