ಚಿಕ್ಕಮಗಳೂರು: ಚಿಕ್ಕಮಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್ ಆಗಿ ಚಾಲಕನ ಭಾರಿ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ.
ಚಾರ್ಮಾಡಿ ಘಾಟಿಯ ಆರನೇ ತಿರುವಿನಲ್ಲಿ ಬಸ್ ಇಳಿಜಾರು ಮಾರ್ಗದಲ್ಲಿ ಸಾಗುತ್ತಿದ್ದ ವೇಳೆ ಒಮ್ಮಿಂದೊಮ್ಮೆಗೇ ಬ್ರೇಕ್ ಫೇಲ್ ಆಗಿದೆ. ಬಸ್ಸು ಓಲಾಡುತ್ತಿರುವುದನ್ನು ಕಂಡ ಸುಮಾರು 30 ಪ್ರಯಾಣಿಕರು ಭಯಗೊಂಡು ಚೀರಲು ಆರಂಭಿಸಿದ್ದಾರೆ. ಈ ವೇಳೆ ಚಾಲಕ ಸಂತೋಷ್ ಬಸ್ ಬ್ರೇಕ್ ಫೇಲ್ ಆಗಿದೆ ಎಂದು ತಿಳಿಸಿದ್ದಾರೆ. ಪ್ರಯಾಣಿಕರ ಜೀವ ಉಳಿಸಲು ಧೈರ್ಯ ತಂದುಕೊಂಡ ಚಾಲಕ ‘ಯಾರು ಕೂಡಾ ಭಯಪಡಬೇಡಿ, ನಾನು ಹೇಗಾದರೂ ಮಾಡಿ ಎಲ್ಲಾದರೂ ಬಸ್ಸನ್ನು ನಿಲ್ಲಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ. ನೀವು ಎಲ್ಲರೂ ಗಟ್ಟಿಯಾಗಿ ಹಿಡಿದುಕೊಳ್ಳಿ. ಯಾರಿಗೂ ಏನೂ ಆಗುವುದಿಲ್ಲ, ಧೈರ್ಯದಿಂದ ಇರಿ’ ಎಂದು ಹೇಳಿದ್ದಾರೆ.
ಚಾಲಕ ವೇಗವಾಗಿಯೇ ಇಳಿಯುತ್ತಿದ್ದ ಬಸ್ಸನ್ನು ಬಹಳ ಕಷ್ಟಪಟ್ಟು ನಿಯಂತ್ರಿಸಿಕೊಳ್ಳುತ್ತಾ ಸೇತುವೆಯೊಂದರ ಕಟ್ಟೆಗೆ ಡಿಕ್ಕಿ ಹೊಡೆಸಿ ಬಸ್ಸನ್ನು ನಿಲ್ಲಿಸಿದ್ದಾರೆ. ಬಸ್ಸು ದಢಾರನೆ ಡಿಕ್ಕಿ ಹೊಡೆದ ರಭಸಕ್ಕೆ ಎಲ್ಲರೂ ಒಮ್ಮೆಗೇ ಮುಗ್ಗರಿಸಿ ಬಿದ್ದಿದ್ದಾರೆ.
ಸಧ್ಯ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕನ ಸಮಯ ಪ್ರಜ್ಞೆಗೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.