ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾದ ರೈತರೊಬ್ಬರನ್ನು ಕೊಳಕು ಬಟ್ಟೆ ಹಾಕಿದ್ದಾರೆ ಎಂಬ ಕಾರಣಕ್ಕೆ ಸಿಬ್ಬಂದಿಗಳು ತಡೆದು ನಿಲ್ಲಿಸಿರುವ ಘಟನೆ ಬೆಂಗಳೂರು ಮೆಟ್ರೋ ನಿಲ್ದಾಣವೊಂದರಲ್ಲಿ ನಡೆದಿದೆ.
ರಾಜಾಜಿನಗರ ನಮ್ಮ ಮೆಟ್ರೋ ಸಿಬ್ಬಂದಿಗಳು ಹಿರಿಯ ವಯಸ್ಸಿನ ರೈತರಿಗೆ ಅವಮಾನ ಮಾಡಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಆ ಟಿಕೆಟ್ ಪಡೆದಿದ್ದರೂ, ಮೆಟ್ರೋ ಸ್ಟೇಷನ್ನಿನೊಳಗೆ ಪ್ರವೇಶ ಪಡೆಯಲು ಸಾಧ್ಯವಿದೆಯಾದರೂ ಕೇವಲ ಬಟ್ಟೆ ಕೊಳಕಾಗಿದೆ ಎಂಬ ಕಾರಣಕ್ಕೆ ಸಿಬ್ಬಂದಿಗಳು ಅವರನ್ನು ಮೆಟ್ರೋ ನಿಲ್ದಾಣದ ಒಳಗೆ ಬಿಡಲಿಲ್ಲ. ಕೊನೆಗೆ ಸಿಬ್ಬಂದಿಗೆ ಕೇರ್ ಮಾಡದೇ ರೈತನನ್ನು ಪ್ರಯಾಣಿಕರು ಒಳಗೆ ಕರೆದುಕೊಂಡು ಹೋಗಿದ್ದಾರೆ.
ಸಿಬ್ಬಂದಿಗಳ ಅತಿರೇಕದ ವರ್ತನೆಯ ವಿಡಿಯೋವನ್ನು ಸಾರ್ವಜನಿಕರು ಎಕ್ಸ್ ಆ್ಯಪ್ ಖಾತೆಗಳಲ್ಲಿ ಹಾಕಿಕೊಂಡು, ಬಿಎಂಆರ್‌ಸಿಎಲ್‌ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರ ಮೆಟ್ರೋ ಇರುವುದಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಲಾಗಿದೆ. ತಪ್ಪು ಕಂಡು ಬಂದ ಹಿನ್ನೆಲೆ ಭದ್ರತಾ ಮೇಲ್ವಿಚಾರಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದ ವ್ಯಕ್ತಪಡಿಸುತ್ತದೆ ಎಂದಿದೆ.